ಬೀದರ್: ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ವ್ಯಾಪಕ ಬೆಳೆ ಹಾನಿ ಹಾಗೂ ಮನೆ ಕುಸಿದು ಹಾನಿಯಾಗಿದೆ. ಸರ್ಕಾರ ತಕ್ಷಣ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು ಎಂದು ಕ್ಷೇತ್ರದ ಬಿಜೆಪಿ ಶಾಸಕರಾದ ಹಾಗೂ ರಾಜ್ಯ ಕಾರ್ಯದರ್ಶಿ ಡಾ.ಶೈಲೇಂದ್ರ ಬೆಲ್ದಾಳೆ ಆಗ್ರಹಿಸಿದ್ದಾರೆ.
ಗುರುವಾರ ಕ್ಷೇತ್ರದ ಮನ್ನಳ್ಳಿ, ಯಾಕತಪುರ, ನಾಗೂರಾ ಮುಂತಾದ ಶಿವಾರುಗಳಲ್ಲಿನ ಜಲಾವೃತಗೊಂಡ ಬೆಳೆ ಹಾನಿ ವೀಕ್ಷಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸುಮಾರು 1000 ಎಕರೆಗೂ ಅಧಿಕ ಉದ್ದು, ಸೋಯಾಬಿನ್, ಕಬ್ಬು, ತೊಗರಿ ಇನ್ನಿತರೆ ಬೆಳೆಗಳು ನಾಶವಾಗಿವೆ. ನಮ್ಮ ಕ್ಷೇತ್ರವು ಕಾರಂಜಾ ಜಲಾಶಯದ ಹಿನ್ನೀರಿನ ಪ್ರದೇಶವಾದ ಹಿನ್ನೆಲೆಯಲ್ಲಿ ಹಿನ್ನೀರಿನಿಂದಲೂ ಸಾಕಷ್ಟು ನಷ್ಟವಾಗಿದೆ. ಇದನ್ನೂ ಓದಿ: ಶಿಕ್ಷಕರಲ್ಲಿ ಕ್ಷಮತೆ ಇರಲಿ: ಕಿರಣಕುಮಾರ
ಒಂದೇ ವಾರದಲ್ಲಿ ಸುಮಾರು 125 ಮಿಮೀ ಮಳೆಯಾಗಿದೆ. ಅತಿವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಿ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಸತತ ಮಳೆಯಿಂದ ಕ್ಷೇತ್ರದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಕೆಲವು ಮನೆ ಸಂಪೂರ್ಣ ಕುಸಿದರೆ ಮತ್ತೆ ಹಲವು ಭಾಗಶಃ ಹಾನಿಯಾಗಿವೆ. ಮನೆ ಹಾನಿಗೀಡಾದ ಸಂತ್ರಸ್ತರಿಗೆ ಈ ಹಿಂದೆ ಬಿಜೆಪಿ ಸರ್ಕಾರದಂತೆ ಪೂರ್ಣ ನಷ್ಟಕ್ಕೆ 5 ಲಕ್ಷ ರೂ. ಭಾಗಶಃ ಆದರೆ 2.50 ಲಕ್ಷ ರೂ. ಸ್ವಲ್ಪ ನಷ್ಟಕ್ಕೆ 50 ಸಾವಿರ ರೂ. ಪರಿಹಾರ ನೀಡಬೇಕು. ಈಗಿನ ಸರ್ಕಾರ ಮನೆ ಹಾನಿಗೆ ಗರಿಷ್ಟ ಪರಿಹಾರ 1.20 ಲಕ್ಷ ರೂ. ಮಾಡಿ ಅನ್ಯಾಯ ಮಾಡಿದೆ. ಸಂತ್ರಸ್ತರಿಗೆ ಐದಾರು ಸಾವಿರ ರೂ. ಪರಿಹಾರ ಕೊಟ್ಟು ಅವರ ನೋವಿನೊಂದಿಗೆ ಚೆಲ್ಲಾಟವಾಡುತ್ತಿದೆ. ಸರ್ಕಾರಕ್ಕೆ ಬಡವರ, ರೈತರ, ಸಂತ್ರಸ್ತರ ಬಗ್ಗೆ ಕಾಳಜಿಯಿದ್ದರೆ ಹಿಂದಿನ ಬಿಜೆಪಿ ಸರ್ಕಾರದ ಮಾದರಿ ಪರಿಹಾರ ಕೊಡಲಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅನೀಲ ಪನ್ನಾಳೆ, ರಾಜರೆಡ್ಡಿ ನಾಗುರಾ, ಸಂಗಮೇಶ, ಕಂದಾಯ ಇಲಾಖೆ ನೀರಕ್ಷಕರು ನಾಗರಾಜ್, ವಿಎ ಆಯೂಬ್ ಸುತ್ತಮುತ್ತಲಿನ ಗ್ರಾಮಗಳ ರೈತರು ಮತ್ತಿತರರು ಉಪಸ್ಥಿತರಿದ್ದರು.