ವಿದ್ಯಾರ್ಥಿನಿಯರ ಒತ್ತಾಯ-ತಾಲ್ಲೂಕು ಕಚೇರಿ ಎದುರು ಧರಣಿ

ವಿದ್ಯಾರ್ಥಿನಿಯರ ಒತ್ತಾಯ-ತಾಲ್ಲೂಕು ಕಚೇರಿ ಎದುರು ಧರಣಿ

ಸಂಡೂರು : ಪಟ್ಟಣದ ಬಾಲಕಿಯರ ಬಿಸಿಎಂ ಹಾಸ್ಟೆಲ್‌ನಲ್ಲಿ ಸಮರ್ಪಕ ಆಹಾರ, ನೀರು ಸೇರಿ ಅಗತ್ಯ ಸೌಲಭ್ಯವಿಲ್ಲವೆಂದು ಆರೋಪಿಸಿ ನಿಲಯದ ಬಾಲಕಿಯರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವರೆಗೆ ಬಾಡಿಗೆ ಮನೆಯಲ್ಲಿ ವಸತಿ ನಿಲಯ ನಡೆಸಲಾಗುತ್ತಿತ್ತು. ಇತ್ತೀಚಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಎರಡೂ ಹಾಸ್ಟೆಲ್ ವಿದ್ಯಾರ್ಥಿನಿಯರನ್ನು ಎಪಿಎಂಸಿ ಬಳಿಯ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಗ್ರಂಥಾಲಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ಹಾಸ್ಟೆಲ್‌ನಲ್ಲಿ ಊಟ ಗುಣಮಟ್ಟದಿಂದ ಕೂಡಿಲ್ಲ. ಹುಳು ಹಿಡಿದ ಅಕ್ಕಿ. ಕೊಳೆತ ತರಕಾರಿ ಬೇಯಿಸಿ ಬಡಿಸುತ್ತಾರೆ. ಕುಡಿಯಲು ಶುದ್ಧ ನೀರಿಲ್ಲ. ಕಳಪೆ ಅಡುಗೆ ಕುರಿತು ಪ್ರಶ್ನಿಸಿದರೆ, ಸಿಬ್ಬಂದಿ ಜಗಳಕ್ಕೆ ಬರುತ್ತಾರೆ ಎಂದು ವಿದ್ಯಾರ್ಥಿನಿಯರು ದೂರಿದರು.

ಅಡುಗೆ ಸಿಬ್ಬಂದಿ ನಡುವೆ ಹೊಂದಾಣಿಕೆ ಇಲ್ಲದೆ ಪ್ರತಿನಿತ್ಯ ಕೂಗಾಡುತ್ತಾರೆ. ವಾರ್ಡನ್ ಸರಿಯಾಗಿ ಹಾಸ್ಟೆಲ್‌ಗೆ ಬರಲ್ಲ ತಾಲ್ಲೂಕು ಬಿಸಿಎಂ ಅಧಿಕಾರಿ ಸಂಗಮೇಶ್‌ಗೆ ಹೇಳಿದರೆ, ಇದೇನ್ ನಿಮ್ಮ ಮನೆ ಅಂದ್ಕೊಂಡಿದ್ದೀರಾ? ನಿಮ್ಮ ನಿಮ್ಮ ಕೆಲಸ ನೀವೇ ಮಾಡಿಕೊಳ್ಳಬೇಕು ಎಂದು ಉದ್ಧಟತನ ತೋರುತ್ತಾರೆಂದು ತಹಶೀಲ್ದಾರ್ ಹೆಚ್.ಜೆ ರಶ್ಮಿ ಬಳಿ ದೂರಿದರು.

ಅಡುಗೆ ಸಿಬ್ಬಂದಿಗೆ ತಹಶೀಲ್ದಾರ್ ತರಾಟೆ

 

ವಿದ್ಯಾರ್ಥಿನಿಯರ ದೂರು ಅಲಿಸಿದ ತಹಶೀಲ್ದಾರ್ ಹೆಚ್.ಜೆ ರಶ್ಮಿ ಮಧ್ಯಾಹ್ನ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಅಡುಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ವಿಷಯ ತಿಳಿದು ಹಾಸ್ಟೆಲ್‌ಗೆ ಭೇಟಿ ನೀಡಿದ ಶಾಸಕ ಇ.ತುಕಾರಾಮ್, ಬಿಸಿಎಂ ಅಧಿಕಾರಿ ಸಂಗಮೇಶ್ ಮತ್ತು ಅಡುಗೆ ಸಿಬ್ಬಂದಿ ನಿರ್ಲಕ್ಷಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ವಿದ್ಯಾರ್ಥಿನಿಯರಿಗೆ ಸಮರ್ಪಕ ಕುಡಿವ ನೀರು ಒದಗಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.

Related