ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ

ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ

ಚಿಕ್ಕಬಳ್ಳಾಪುರ: ಕೋವಿಡ್-19 ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಸ್ವಯಂ ನಿಯಂತ್ರಣ ಹಾಕಿಕೊಳ್ಳುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜನರಲ್ಲಿ ಅರಿವು ಮೂಡಿಸುವಲ್ಲಿ ಸಿಬ್ಬಂದಿಯೊಂದಿಗೆ ಶ್ರಮಿಸುತ್ತಿದ್ದಾರೆ.
ನಿನ್ನೆ ಬೆಳಿಗ್ಗೆಯಿಂದ ಬೀದಿಗೆ ಇಳಿದ ಪೊಲೀಸ್ ಸಿಬ್ಬಂದಿ ಅಂಗಡಿ-ಮುಂಗಟ್ಟುಗಳ ಬಳಿ ಜನಜಂಗುಳಿ ಸೇರದಂತೆ ಎಚ್ಚರಿಕೆ ವಹಿಸಿದರು. ಸರ್ಕಾರದ ನೀತಿ-ನಿಯಮಗಳ ಅನ್ವಯ ಅಗತ್ಯ ಸೇವಾ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಅಂಗಡಿಗಳನ್ನು ಮುಚ್ಚುವಂತೆ ಸೂಚನೆ ನೀಡಿದರು.

ಸಬ್ ಇನ್ಸ್ಪೆಕ್ಟರ್ ಹೊನ್ನೇಗೌಡ ಅವರ ನೇತೃತ್ವದ ತಂಡ ನಗರದ ಬಿ.ಬಿ. ರಸ್ತೆಯ ಅಂಗಡಿ ಮಾಲೀಕರ ಜೊತೆ ಮಾತನಾಡುತ್ತಾ ಅವರಿಗೆ ತಿಳುವಳಿಕೆ ನೀಡಿ ನಿಯಂತ್ರಣದಲ್ಲಿ ಜನರ ಸಹಕಾರ ಬಹಳ ಮುಖ್ಯ ಎಂದು ಹೇಳಿದರು. ನಗರ ಠಾಣೆಯ ಮುಖ್ಯಪೇದೆ ಮಂಜುನಾಥ ಅವರು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೋಟೆಲುಗಳು, ಬಾರುಗಳು ಮತ್ತು ಇತರೆ ಅಂಗಡಿಗಳಿಗೆ ಹೋಗಿ ಯಾವುದೇ ರೀತಿಯ ತಿಂಡಿ ತಿನಿಸುಗಳು ಮತ್ತು ಆಹಾರವನ್ನು ಗ್ರಾಹಕರಿಗೆ ಸ್ಥಳದಲ್ಲೇ ಕೊಡುವಂತಿಲ್ಲ. ಪಾರ್ಸಲ್ ಕೊಡುವುದಕ್ಕೆ ಅವಕಾಶವಿದೆ ಎಂದು ತಿಳುವಳಿಕೆ ನೀಡಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಂಗಡಿಗಳಿಗೆ ಪಂಚಾಯಿತಿ ಅಧಿಕಾರಿಗಳಿಗೆ ತಿಳುವಳಿಕೆ ಕೊಡುತ್ತಿದ್ದಾರೆ. ಗುದ್ದು ಜಿಲ್ಲಾ ಪೊಲೀಸ್ ರಕ್ಷಣಾ ಅಧಿಕಾರಿಗಳಾದ ನಿತಿನ್ ಕುಮಾರ್ ಅವರು ನಗರದ ಎಲ್ಲಾ ರಸ್ತೆಗಳಲ್ಲಿ ಸಂಚಾರ ಮಾಡಿ ಕಾನೂನಿನ ಮೂಲಕ ಮತ್ತು ತಿಳುವಳಿಕೆ ಕೊಡುವುದರ ಮೂಲಕ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡುತ್ತಿದ್ದಾರೆ. ಡಿವೈಎಸ್ಪಿ ರವಿಶಂಕರ್ ಅವರು ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ಭೇಟಿ ಕೊಡುವುದರ ಮೂಲಕ ಕಾನೂನಿನ ತಿಳುವಳಿಕೆ ನೀಡಿ ಜನರಲ್ಲಿ ಮೊದಲ ಹಂತದ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.

Related