ಗಾಯಕಿ ಸುಷ್ಮಿತಾ ಆತ್ಮಹತ್ಯೆ

ಗಾಯಕಿ ಸುಷ್ಮಿತಾ ಆತ್ಮಹತ್ಯೆ

ಬೆಂಗಳೂರು, ಫೆ. 17: ಕೌಟುಂಬಿಕ ಕಲಹದಿಂದ ಗಾಯಕಿ ಸುಷ್ಮಿತಾ ತಮ್ಮ ತಾಯಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಕನ್ನಡ ಸಿನಿಮಾ, ಧಾರಾವಾಹಿ, ಸ್ಟೇಜ್ ಶೋಗಳಲ್ಲಿ ಹಾಡುತ್ತಿದ್ದ ಸುಷ್ಮಿತಾ ಅವರು ತಮ್ಮ ಡೆತ್ ನೋಟ್‌ನಲ್ಲಿ ಪತಿ ಹಾಗೂ ಅವರ ಕುಟುಂಬದ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ.

ಸುಗಮ ಸಂಗೀತ ಗಾಯಕಿಯಾಗಿ, ಚಲನಚಿತ್ರ, ಧಾರವಾಹಿಗಳ ಹಿನ್ನಲೆಯ ಗಾಯಕಿಯಾಗಿ ಸುಷ್ಮಿತಾ ರಾಜೇ ಗುರುತಿಸಿಕೊಂಡಿದ್ದರು. ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದ ಶರತ್ ಹಾಗೂ ಆತನ ಮನೆಯವರ ಕಿರುಕುಳಕ್ಕೆ ಬೇಸತ್ತು ಮಾಳಗಾಳದ ತಾಯಿ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.

ಬೆಂಗಳೂರಿನ ನಾಗರಭಾವಿಯಲ್ಲಿ ನೆಲೆಸಿದ್ದ ಸುಷ್ಮಿತಾ ಅವರ ಸಾವಿಗೆ ಆಕೆಯ ಪತಿ ಹಾಗೂ ತಾಯಿ ಕಾರಣ ಎಂದು ಸುಷ್ಮಿತಾ ಮನೆಯವರು ಪೊಲೀಸರಿಗೆ ದೂರಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ.

ಮಾಳಗಾಳದ ಮನೆಯಲ್ಲಿ ನೇಣಿಗೆ ಶರಣಾಗುವ ಮುನ್ನಾ ಡೆತ್ ನೋಟ್ ಬರೆದಿರುವ ಸುಷ್ಮಿತಾ, ತಮ್ಮ ಸೋದರ ಸಚಿನ್ ಮೊಬೈಲಿಗೆ ಡೆತ್ ನೋಟ್ ವಾಟ್ಸಾಪ್ ಮಾಡಿದ್ದಾರೆ. ಈ ಸಂದೇಶವನ್ನು ತಪ್ಪದೇ ಅಮ್ಮನಿಗೆ ತೋರಿಸು ಮರೆಯಬೇಡ ಎಂದು ಕೊನೆಯಲ್ಲಿ ಬರೆದಿದ್ದಾರೆ.

‘ಅಮ್ಮ ನನ್ನನ್ನು ಕ್ಷಮಿಸು. ನಾನೇ ಮಾಡಿಕೊಂಡ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸುತ್ತಿದ್ದೇನೆ. ನನಗೆ ಅವರ ದೊಡ್ಡಮ್ಮನ ಮಾತು ಕೇಳಿಕೊಂಡು ಚಿತ್ರ ಹಿಂಸೆ ಕೊಡುತ್ತಿದ್ದರು. ಮಾತೆತ್ತಿದ್ರೆ ಮನೆ ಬಿಟ್ಟು ಹೋಗು ಅಂತಿದ್ರು. ನನಗೆ ಮಾನಸಿಕವಾಗಿ ತುಂಬಾ ಹಿಂಸೆ ಆಗುತ್ತಿತ್ತು. ಅವರನ್ನು ಮಾತ್ರ ಸುಮ್ಮನೇ ಬಿಡಬೇಡ. ನನ್ನ ಸಾವಿಗೆ ಶರತ್ ವೈದೇಹಿ, ಗೀತಾ ನೇರವಾಗಿ ಕಾರಣರಾಗಿರುತ್ತಾರೆ. ಎಷ್ಟು ಬೇಡಿಕೊಂಡು ಕಾಲು ಹಿಡಿದ್ರು ಅವನ ಮನಸ್ಸು ಕರಗಲಿಲ್ಲ. ಅವರ ಮನೆಯಲ್ಲಿ ನನಗೆ ಸಾಯಲು ಇಷ್ಟವಿರಲಿಲ್ಲ. ಮದುವೆಯಾದಾಗಿನಿಂದ ಇದೆ ರೀತಿ ಹಿಂಸೆ ಅಮ್ಮ. ಯಾರ ಹತ್ತಿರಾನು ಹೇಳಿಕೊಂಡಿರಲಿಲ್ಲ. ನನ್ನನ್ನು ನಮ್ಮ ಊರಿನಲ್ಲಿ ಮಣ್ಣು ಮಾಡಿ. ಅಥವಾ ಸುಡುವ ಕಾರ್ಯವನ್ನು ನನ್ನ ತಮ್ಮನೇ ಮಾಡಲಿ. ಅವರನ್ನು ಮಾತ್ರ ಸುಮ್ಮನೆ ಬಿಡಬೇಡ. ಇಲವಾದರೆ, ನನ್ನ ಆತ್ಮಕ್ಕೆ ಶಾಂತಿ ದೊರೆಯುವುದಿಲ್ಲ’ ಎಂದು ಬರೆದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Related