ಸಿಎಂ ಹುದ್ದೆಗೆ ರಾಹುಲ್ ಗಾಂಧಿ ಅವರು ಫಿಕ್ಸ್ ಮಾಡಿರುವ ರೇಟೆಷ್ಟು ಸಿದ್ದರಾಮಯ್ಯನವರೇ: ಆರ್ ಅಶೋಕ್

ಸಿಎಂ ಹುದ್ದೆಗೆ ರಾಹುಲ್ ಗಾಂಧಿ ಅವರು ಫಿಕ್ಸ್ ಮಾಡಿರುವ ರೇಟೆಷ್ಟು ಸಿದ್ದರಾಮಯ್ಯನವರೇ: ಆರ್ ಅಶೋಕ್

ಬೆಂಗಳೂರು: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಗೆ ಇಳಿದಿದೆ. ಪ್ರತಿ ಒಂದು ಹುದ್ದೆಗೆ ಇಂತಿಷ್ಟು ಅಂತ ಹೇಳಿ ರೇಟ್ ಫಿಕ್ಸ್ ಮಾಡಿ ವರ್ಗಾವಣೆ ದಂಧೆಗೆ ಇಳಿದಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೀಟ್ ಮಾಡಿದ ಅವರು, ಮುಖ್ಯಮಂತ್ರಿ ಹುದ್ದೆಗೆ ರಾಹುಲ್ ಗಾಂಧಿ ಎಷ್ಟು ರೇಟ್ ಫಿಕ್ಸ್ ಮಾಡಿದ್ದಾರೆ ಸಿದ್ದರಾಮಯ್ಯನವರೇ ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದ್ದಾರೆ.

ವರ್ಗಾವಣೆ ದಂಧೆಗೆ ರೇಟ್ ಫಿಕ್ಸ್! ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ಎಷ್ಟು ಸಾಂಸ್ಥಿಕ ರೂಪ ಪಡೆದಿದೆ ಅಂದರೆ ಅಬಕಾರಿ ಇಲಾಖೆಯಲ್ಲಿ ಪೇದೆಯಿಂದ ಹಿಡಿದು ಉಪ ಆಯುಕ್ತ ಹುದ್ದೆವರೆಗೆ 5 ಲಕ್ಷ ರೂಪಾಯಿಯಿಂದ 3.5 ಕೋಟಿ ರೂಪಾಯಿ ವರೆಗೆ ಲಂಚ ಫಿಕ್ಸ್ ಆಗಿದೆ. ಅಂದಹಾಗೆ ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಹುಲ್ ಗಾಂಧಿ ಅವರು ಫಿಕ್ಸ್ ಮಾಡಿರುವ ರೇಟೆಷ್ಟು ಸಿಎಂ ಸಿದ್ದರಾಮಯ್ಯನವರೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಆರ್ಥಿಕ ಸಮೀಕ್ಷೆ ವರದಿ ಮಂಡಿಸಿದ ಹಣಕಾಸು ಸಚಿವೆ

ಸಿಎಂ ಸಿದ್ದರಾಮಯ್ಯನವರೇ, ಶಾಸಕರನ್ನು, ಸಚಿವರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾಗದೆ ಸಾರ್ವಜನಿಕರ ಹಣ ಪೋಲು ಮಾಡಿ ಶಾಸಕರಿಗೆ, ಸಚಿವರ ಸಂಬಂಧಿಗಳಿಗೆ ಬೇಕಾಬಿಟ್ಟಿ ಸ್ಥಾನಮಾನ ನೀಡುತ್ತಿರುವ ನೀವು ಕರ್ನಾಟಕ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಅಂದರೆ ತಪ್ಪಾಗಲಾರದು. ಇನ್ನೆಷ್ಟು ದಿನ ಈ ಭಂಡ ಬಾಳು. ಜನ ನಿಮ್ಮ ವಿರುದ್ಧ ದಂಗೆ ಏಳುವ ಮುನ್ನ ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಿ. ರಾಜ್ಯದ ಗೌರವವನ್ನೂ ಉಳಿಸಿ ಎಂದು ಅಶೋಕ್ ಟೀಕಾ ಪ್ರಹಾರ ನಡೆಸಿದ್ದಾರೆ.

Related