ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ – ಸಿದ್ದರಾಮಯ್ಯ

ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ – ಸಿದ್ದರಾಮಯ್ಯ

ಬೆಂಗಳೂರು : ನೆರೆಯಿಂದ ಹಾನಿಗೆ ಒಳಗಾಗಿರುವ ಜಿಲ್ಲೆಗಳ ಎಲ್ಲಾ ಸಂತ್ರಸ್ಥರಿಗೆ, ಮನೆ, ಬೆಳೆ, ಜಾನುವಾರು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಬಿಡುಗಡೆ ಮಾಡುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಜು. 26, 27 ರಂದು ಬಾಗಲಕೋಟೆ, ಬೆಳಗಾವಿ, ಗದಗ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ, ಆಗಸ್ಟ್ 2 ರಂದು ಉತ್ತರ ಕನ್ನಡ ಜಿಲ್ಲೆಯ ಹಲವಾರು ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿದ್ದು, ಈ ಜಿಲ್ಲೆಗಳಲ್ಲಿ ಮಳೆಯಿಂದ ತೀವ್ರ ಸ್ವರೂಪದ ಅನಾಹುತಗಳನ್ನು ಸೃಷ್ಟಿಸಿದೆ. ಸಹಸ್ರಾರು ಮಂದಿ ಸಂಕಷ್ಟಕ್ಕೆ ಸಿಲುಕಿರುವ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದೇನೆಂದು ಪತ್ರದ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಜಿಲ್ಲೆಗಳಲ್ಲಿ ರಸ್ತೆ, ಸೇತುವೆ, ಶಾಲೆ, ಆಸ್ಪತ್ರೆ, ಅಂಗನವಾಡಿ, ಸರ್ಕಾರಿ ಕಚೇರಿ ಕಟ್ಟಡಗಳನ್ನು ಹಾನಿಗೊಳಗಾಗಿದೆ. ಪ್ರವಾಹದಿಂದ ಕೊಚ್ಚಿ ಬಂದ ಮಣ್ಣು, ಕೆಸರು ತುಂಬಿಕೊಂಡು ಮನೆಗಳ ಜೊತೆ ಮನೆಯೊಳಗಿದ್ದ ನಿತ್ಯ ಬಳಕೆಯ ವಸ್ತುಗಳು ಕೊಚ್ಚಿಕೊಂಡು ಹೋಗಿವೆ. ಹಾನಿಗೊಳಗಾದ ಪ್ರದೇಶಗಳ ಜನರಿಗೆ ಇದುವರೆಗೂ ಸಮರ್ಪಕ ಪರಿಹಾರ ಸಿಕ್ಕಿಲ್ಲ. ನದಿ ಪಾತ್ರದ ಗ್ರಾಮಗಳು ಸ್ಥಳಾಂತರ ಆಗಿಲ್ಲ ಎಂದು ನೆರೆಪೀಡಿತರು ತಮ್ಮ ಸಂಕಷ್ಟ ಹೇಳಿಕೊಂಡು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

ನೆರೆಯಿಂದ ತಮಗಾದ ಸಂಕಷ್ಟಗಳನ್ನು ಜನ ಕಣ್ಣೀರಿಟ್ಟು ನನ್ನ ಜೊತೆ ಹಂಚಿಕೊಂಡಿದ್ದಾರೆ. . ಕೋವಿಡ್ ಲಾಕ್‌ಡೌನ್ ಕಾರಣದಿಂದ ಸಂಕಷ್ಟದಲ್ಲಿದ್ದ ವ್ಯಾಪಾರಿಗಳು, ರೈತರು, ಕೂಲಿ ಕಾರ್ಮಿಕರ ಬದುಕು ಈಗ ಸಂಪೂರ್ಣ ನೆಲಕಚ್ಚಿದೆ. ಇವರಿಗೆ ತಕ್ಷಣ ಪುನರ್ವಸತಿ ಕಲ್ಪಿಸಿ ವ್ಯಾಪಾರಕ್ಕೆ ಅನುವು ಮಾಡಿಕೊಡುವ ಜೊತೆಗೆ ಆರ್ಥಿಕ ನೆರವು ನೀಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

2019-2020 ರಲ್ಲೂ ನೆರೆಗೆ ತುತ್ತಾಗಿದ್ದ ಪ್ರದೇಶಗಳ ಸಾಕಷ್ಟು ಜನರೇ ಈ ಬಾರಿಯೂ ಪ್ರವಾಹಕ್ಕೆ ಸಿಲುಕಿದ್ದಾರೆ. ಹಿಂದಿನ ಅವಧಿಗಳಲ್ಲಿ ಸರ್ಕಾರ ಕೊಟ್ಟ ಪರಿಹಾರ “ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ” ಎನ್ನುವಂತಾಗಿದೆ ಎಂದು ಪತ್ರದ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related