ಬೊಮ್ಮನಹಳ್ಳಿ ಜನತೆಗೆ ಕೃತಜ್ಞತೆ ಸಲ್ಲಿಸಿದ ಸತೀಶ್ ರೆಡ್ಡಿ

ಬೊಮ್ಮನಹಳ್ಳಿ ಜನತೆಗೆ ಕೃತಜ್ಞತೆ ಸಲ್ಲಿಸಿದ ಸತೀಶ್ ರೆಡ್ಡಿ

ಬೊಮ್ಮನಹಳ್ಳಿ: ನಾಲ್ಕನೇ ಬಾರಿ ಶಾಸಕನಾಗಿ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿದ ಬೊಮ್ಮನಹಳ್ಳಿ ಮಹಾ ಜನತೆಯ ಋಣವನ್ನು ಎಂದಿಗೂ ಮರೆಯಲಾರೆ ಎಂದು ಶಾಸಕ ಸತೀಶ್ ರೆಡ್ಡಿ ಹೇಳಿದರು. ಭಾನುವಾರ ಹೆಚ್ಎಸ್ಆರ್ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ‘ಕೃತಜ್ಞತಾ ಸಮಾರಂಭ’ದಲ್ಲಿ ಮಾತನಾಡಿದರು.

ಹೆಚ್ಎಸ್ಆರ್ ಬಡಾವಣೆಯಿಂದ ಸಾರಕ್ಕಿ ಕೆರೆವರೆಗೆ ಸುಮಾರು 48 ಕಡೆಗಳಲ್ಲಿ ನೆರೆ ಸಂಭವಿಸುತ್ತಿತ್ತು. ಇದೀಗ ಬೊಮ್ಮನಹಳ್ಳಿ ಪ್ರದೇಶ ನೆರೆಯಿಂದ ಮುಕ್ತವಾಗಿದೆ. ಐದು ವರ್ಷಗಳ ಸಮಯವನ್ನು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮೀಸಲಿಡುತ್ತೇನೆ ಎಂದು ಜನತೆಗೆ ಭರವಸೆ ನೀಡಿದರು. ಸೋತ ಕಾಂಗ್ರೆಸ್ ಅಭ್ಯರ್ಥಿ ಅಭಿವೃದ್ಧಿಗೆ ಅಡ್ಡಿಪಡಿಸುವ ಹತಾಶೆಯ ಮಾತುಗಳನ್ನಾಡಿದ್ದಾರೆ, ಇದಕ್ಕೆ ಜನರೇ ಪಾಠ ಕಲಿಸುತ್ತಾರೆ ಎಂದರು.

ಶಾಸಕನಾಗಿ ಶಾಸನ ಸಭೆಯಲ್ಲಿ ಕ್ಷೇತ್ರ ಮತ್ತು ರಾಜ್ಯದ ಸಮಸ್ಯೆಗಳತ್ತ ಸರ್ಕಾರದ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಹಾಗೆಯೇ ರಾಜ್ಯದ ಜನರಿಗೆ ‘ಗ್ಯಾರೆಂಟಿ’ ಆಶ್ವಾಸನೆ ನೀಡಿರುವ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯಬೇಕೆಂದು ಒತ್ತಾಯಿಸಿದರು.

ಗೆಲುವಿಗೆ ಹಗಲಿರುಳು ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುಮಾರು 10 ಸಾವಿರ ಜನರಿಗೆ ಮಾಂಸದೂಟ ವ್ಯವಸ್ಥೆ ಮಾಡಲಾಗಿತ್ತು. ಶಾಸಕ ಆರ್.ಅಶೋಕ್, ವಿಧಾನ ಪರಿಷತ್ ಸದಸ್ಯ ಗೋಪಿನಾಥ ರೆಡ್ಡಿ, ಮಾಜಿ ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮಿ ಮುರಳಿ, ಬಿಜೆಪಿ ಮುಖಂಡರಾದ ಮಂಜುನಾಥ್ , ಸೋಮಸಂದ್ರಪಾಳ್ಯ ಶ್ರೀನಿವಾಸ ರೆಡ್ಡಿ ಭಾಗವಹಿಸಿದ್ದರು.

Related