ಚಿಕ್ಕಬಳ್ಳಾಪುರ: ಸಮಾಜ, ಧರ್ಮ ಮತ್ತು ಸಂಸ್ಕೃತಿಗಾಗಿ ಕಳಕಳಿಯಿಂದ ವ್ಯಕ್ತಿಯೋರ್ವವನು ತನ್ನನ್ನು ತಾನು ತೊಡಗಿಸಿಕೊಂಡರೆ ಆ ಕ್ಷೇತ್ರ ತಪೋಭೂಮಿಯಾಗುತ್ತದೆ. ಆಚಾರದ ಬದುಕಿನಿಂದ ಸಂಸ್ಕೃತಿ ಉಳಿಯುತ್ತದೆ. ಸತ್ಯಸಾಯಿ ಗ್ರಾಮದಲ್ಲಿ ದೇಶದ ಭವ್ಯ ಸಂಸ್ಕೃತಿ ಜಾಗೃತಗೊಂಡಿದೆ. ಪ್ರಾಚೀನ ಕಾಲದಲ್ಲಿ ಪ್ರಪಂಚದ ಮೂಲೆ ಮೂಲೆಗಳಿಂದ ಸಂಸ್ಕಾರ ಜಾಗೃತಿಯ ಅರಿವಿಗಾಗಿ ಭಾರತಕ್ಕೆ ಬರುತ್ತಿದ್ದರು. ಈಗ ಅದೇ ಕಾರ್ಯ ಮತ್ತೆ ಸತ್ಯಸಾಯಿ ಗ್ರಾಮದಲ್ಲಿ ಜಾಗೃತವಾಗಿದ್ದು ದೇಶದ ಸನಾತನ ಸಂಸ್ಕೃತಿಯ ಪುನರುತ್ಥಾನದ ಮುಂಬೆಳಗನ್ನು ತೋರಿಸುತ್ತಿದೆ. ಯಾವುದೇ ಸತ್ಕಾರ್ಯ ಸತ್ಕರ್ಮಗಳು ಗಟ್ಟಿಯಾಗಿ ನಿಲ್ಲಬೇಕಾದರೆ ಅದಕ್ಕೆ ತ್ಯಾಗ ಮತ್ತು ಸೇವೆಯ ಭದ್ರ ಬುನಾದಿ ಇರಬೇಕು. ಅಂತಹ ಕಾರ್ಯ ಸತ್ಯಸಾಯಿ ಗ್ರಾಮದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಮೂಲಕ ನೆರವೇರುತ್ತಿದೆ.
ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಅಧ್ಯಯನ ಮಾಡದ ವಿಷಯಗಳಿಲ್ಲ ಎಂಬ ಮಾತಿನಂತೆ ಸದ್ಗುರುಗಳು ಎಲ್ಲಾ ಕ್ಷೇತ್ರಗಳನ್ನೂ ಸ್ಪರ್ಶಿಸಿ ದೇಶದ ಭವ್ಯ ಪರಂಪರೆಯನ್ನು ಪುನರುದ್ದಾರ ಮಾಡುತ್ತಿದ್ದಾರೆ. ಮಹಾತ್ಮರು, ಅವತಾರ ಪುರುಷರು ಕಾಲಕಾಲಕ್ಕೆ ಈ ಮಣ್ಣಲ್ಲಿ ಅವತರಿಸಿ ಬಂದ ಕಾರಣ ಭವ್ಯ ಪರಂಪರೆ ಉಳಿದಿದೆ. ಭವಿಷ್ಯದಲ್ಲಿ ಇಡೀ ಪ್ರಪಂಚವೇ ಮತ್ತೊಮ್ಮೆ ಭಾರತದ ಕಡೆಗೆ ತಮ್ಮ ದೃಷ್ಟಿಯನ್ನು ಹರಿಸಲಿದೆ. ಸಾರ್ಥಕ ಬದುಕಿನ ಅರ್ಥಪೂರ್ಣ ಪಾಠ ಸತ್ಯಸಾಯಿ ಗ್ರಾಮದಲ್ಲಿ ಕಾಣಲು ಸಾಧ್ಯ, ಎಂದು ಕನ್ನಡಿಗರೇ ಆದ ಮೇಘಾಲಯದ ರಾಜ್ಯಪಾಲ ಸಿಹೆಚ್ ವಿಜಯಶಂಕರ್ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದ ಶ್ರೀ ಸತ್ಯಸಾಯಿ ದಸರಾ ಮಹೋತ್ಸವ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಲೋಕ ಕಲ್ಯಾಣಾರ್ಥವಾಗಿ ನಡೆಯುವ ಯಾಗದ ಪೂರ್ಣಾಹುತಿಯನ್ನು ನೆರವೇರಿಸಿ ಮಾತನಾಡಿದರು. ಇದನ್ನೂ ಓದಿ: ಜಾತಿ ಜನಗಣತಿ ಬಗ್ಗೆ ಗೃಹ ಸಚಿವರು ಹೇಳಿದ್ದೇನು?
ಮಾತೆ ಕೂಷ್ಮಾಂಡ ದೇವಿ, ಶ್ರೀ ರಾಮ ನಾಮ ತಾರಕ ಹೋಮ, ಆಂಜನೇಯ ಹೋಮ, ಶ್ರೀ ಸಾಯಿ ಗಾಯತ್ರಿ ಹೋಮ, ಇತ್ಯಾದಿಗಳು ನೆರವೇರಿದ ನವರಾತ್ರಿಯ 5ನೇ ದಿನವಾದ ಈ ದಿವಸ ರಾಜ್ಯ ಸರ್ಕಾರದ ಮಾಜಿ ವಿಧಾನಸಭಾಧ್ಯಕ್ಷರೂ ಹಾಗೂ ಪ್ರಸ್ತುತ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಭಕ್ತ ಜನ ಬಂಧುಗಳನ್ನು ಉದ್ದೇಶಿಸಿ ಮಾತನಾಡಿ, ತನಗೂ ಈ ಸಂಸ್ಥೆಗೂ ನಿರಂತರವಾದ ಸಂಪರ್ಕವಿದ್ದು ಇಲ್ಲಿನ ಕಾರ್ಯಕ್ರಮಗಳನ್ನು ಅವಲೋಕಿಸುತ್ತಿದ್ದೇನೆ. ಮನುಷ್ಯ ಜನ್ಮ ದೊರತಿರುವುದೇ ಒಳಿತನ್ನು ಮಾಡುವುದಕ್ಕಾಗಿ. ಎಲ್ಲಿ ಒಳಿತಿದಿಯೋ ಅಲ್ಲಿ ಸತ್ಸಂಗವಿರುತ್ತದೆ. ಸತ್ಸಂಗವು ಮುಂದಿನ ಜನ್ಮಕ್ಕೆ ಕೂಡಿಡುವ ಆಪದ್ಧನ, ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ತಿರುಚಿಯ ಆಧೀನಂ ಮತ್ತು ತಂಬೀರನ್ ಮಹಾಸ್ವಾಮಿಗಳವರು ಹಾಗೂ ಮದ್ರಾಸ್ ಹೈಕೋರ್ಟ್ ಮಧುರೈ ವಿಭಾಗೀಯ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀ ಜಿ ಆರ್ ಸ್ವಾಮಿನಾಥನ್ ರವರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದರು.