ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣಕ್ಕೆ ಸಿಎಂಗೆ ಮನವಿ: ಡಿಕೆಶಿ

 ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣಕ್ಕೆ ಸಿಎಂಗೆ ಮನವಿ: ಡಿಕೆಶಿ

ಬೆಂಗಳೂರು: ನಗರಾಭಿವೃದ್ಧಿ ಸಚಿವರು ಮತ್ತು ಕೆಪಿಸಿಸಿ ಅಧ್ಯಕ್ಷರಾಗಿರುವಂತಹ ಡಿಕೆ ಶಿವಕುಮಾರ್ ಅವರು ಈಗಾಗಲೇ ಬೆಂಗಳೂರು ಸೇರಿದಂತೆ ಬೆಂಗಳೂರು ಸುತ್ತಮತ್ತಲಲ್ಲಿರುವ ಜಿಲ್ಲೆ ಮತ್ತು ತಾಲೂಕುಗಳ ಅಭಿವೃದ್ಧಿಗಳ ಬಗ್ಗೆ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಹಾರೋಹಳ್ಳಿ ತಾಲೂಕುಗಳ ಭವಿಷ್ಯ ಹಾಗೂ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ತಮ್ಮ ನೇತೃತ್ವದ ಜಿಲ್ಲೆಯ ನಾಯಕರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಸ್ತಾವನೆ ನೀಡಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಮುಖಂಡರನ್ನು ಒಳಗೊಂಡ ಡಿಸಿಎಂ ನೇತೃತ್ವದ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಜಿಲ್ಲೆಯ ಮರುನಾಮಕರಣ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಮಂಗಳವಾರ ನೀಡಿದರು.

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಶಿವಕುಮಾರ್ ಅವರು, “ಬೆಂಗಳೂರು ನಗರ ಸೇರಿದಂತೆ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಸೇರಿದಂತೆ ನಾವೆಲ್ಲರೂ ಮೂಲತಃ ಬೆಂಗಳೂರು ಜಿಲ್ಲೆಯವರು. ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆ ಎಂದು ಹಿಂದೆ ವಿಭಾಗ ಮಾಡಲಾಯಿತು.

ರಾಮನಗರವನ್ನು ಕೇಂದ್ರಾಡಳಿತವಾಗಿಟ್ಟುಕೊಂಡೇ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವುದು ಅಗತ್ಯ. ಬೆಂಗಳೂರು ಜಾಗತಿಕ ಮನ್ನಣೆ ಹೊಂದಿದ್ದು, ಈ ಜಿಲ್ಲೆಯ ಹೆಸರು ಉಳಿಸಿಕೊಳ್ಳಲು ನನ್ನ ಮುಖಂಡತ್ವದಲ್ಲಿ ಜಿಲ್ಲೆಯ ನಾಯಕರು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದನ್ನೂ ಓದಿ: ಧಗಧಗನೇ ಹೊತ್ತಿ ಉರಿದ ಬಿಎಂಟಿಸಿ

ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮಾಡುವುದರಿಂದ ಮುಂದೆ ರಾಮನಗರ, ಚನ್ನಪಟ್ಟಣ, ಮಾಗಡಿ ಸೇರಿದಂತೆ ಮೈಸೂರುವರೆಗೂ ಅಭಿವೃದ್ಧಿ ಸಾಧಿಸಲು, ಕೈಗಾರಿಕೆಗಳ ಸ್ಥಾಪನೆಗೆ ಆಹ್ವಾನಿಸಲು, ಜತೆಗೆ ಆಸ್ತಿ ಮೌಲ್ಯ ಹೆಚ್ಚಳಕ್ಕೂ ನೆರವಾಗುತ್ತದೆ. ಬೆಂಗಳೂರಿನ ಒಂದು ದಿಕ್ಕಿನಲ್ಲಿ ಆಂಧ್ರ ಪ್ರದೇಶ, ಮತ್ತೊಂದು ದಿಕ್ಕಿನಲ್ಲಿ ತಮಿಳುನಾಡು ರಾಜ್ಯದ ಗಡಿ ಬರುತ್ತದೆ. ಹೀಗಾಗಿ ಬೆಂಗಳೂರಿನ ಅಭಿವೃದ್ಧಿ ವಿಸ್ತರಣೆಗೆ ನಮಗೆ ಉಳಿದಿರುವುದು ತುಮಕೂರು ಹಾಗೂ ಈ ಭಾಗ ಮಾತ್ರ. ನಮ್ಮ ಹೆಸರನ್ನು ನಾವು ಉಳಿಸಿಕೊಳ್ಳುತ್ತಿದ್ದೇವೆ.

ಇದು ಮರುನಾಮಕರಣವಷ್ಟೇ, ಹೊಸ ಜಿಲ್ಲೆಯಲ್ಲ

ಹೊಸ ಜಿಲ್ಲೆಗೆ ನೀಡಿರುವ ಪ್ರಸ್ತಾವನೆಯಲ್ಲಿ ಯಾವ ಯಾವ ಕ್ಷೇತ್ರಗಳು ಬರಲಿವೆ ಎಂಬ ಪ್ರಶ್ನೆಗೆ, “ನಾವು ಯಾವುದೇ ಹೊಸ ಜಿಲ್ಲೆ ಮಾಡುತ್ತಿಲ್ಲ. ಇರುವ ಜಿಲ್ಲೆ ಹಾಗೇ ಇರಲಿದೆ. ರಾಮನಗರ, ಚನ್ನಪಟ್ಟಣ, ಮಾಗಡಿ, ಹಾರೋಹಳ್ಳಿ, ಕನಕಪುರ – ಈ ಐದು ತಾಲೂಕುಗಳನ್ನು ಒಳಗೊಂಡು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕಾರಣ ಮುಂದಾಗಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಇಕ್ಬಾಲ್ ಹುಸೈನ್, ಮಾಜಿ ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಶಾಸಕರಾದ ಪುಟ್ಟಣ್ಣ, ಎಸ್‌. ರವಿ, ಸುಧಾಮದಾಸ್, ಬೆಂಗಳೂರು ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಘುನಂದನ್ ರಾಮಣ್ಣ, ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ, ರಾಜು, ಅಶ್ವಥ್ ಮತ್ತಿತರರು ಉಪಸ್ಥಿತರಿದ್ದರು.

Related