ಮಾತೃಭೂಮಿ ಪ್ರತಿಷ್ಠಾನದಿಂದ ಕಳಚೆ ಸಂತ್ರಸ್ತರಿಗೆ ಪರಿಹಾರ

ಮಾತೃಭೂಮಿ ಪ್ರತಿಷ್ಠಾನದಿಂದ ಕಳಚೆ ಸಂತ್ರಸ್ತರಿಗೆ ಪರಿಹಾರ

ಯಲ್ಲಾಪುರ : ಕಳಚೆ ಗ್ರಾಮದಲ್ಲಿ ಸಂಭವಿಸಿದ ಭಾರಿ ಭೂ ಕುಸಿತದಿಂದ ಸಂತ್ರಸ್ತರ ಜನರಿಗೆ, ಯಲ್ಲಾಪುರದ ಮಾತೃಭೂಮಿ ಸೇವಾ ಪ್ರತಿಷ್ಠಾನ ಐದು ಲಕ್ಷ ರೂ. ನಗದು ಪರಿಹಾರ ಮತ್ತು ಎರಡು ಲಕ್ಷ ರೂ ಪ್ಯಾಕೇಜ್ ಘೋಷಿಸಿ, ಹಾನಿಗೊಳಗಾದವರಿಗೆ ಸಾಂತ್ವನ ಹೇಳುವ ಕಾರ್ಯ ಮಾಡಿದರು.

ಸಂಸ್ಥೆಯ ಅಧ್ಯಕ್ಷ, ಶ್ರೀರಂಗ ಕಟ್ಟಿಯವರ ನೇತೃತ್ವದಲ್ಲಿ ಸಂಸ್ಥೆಯ ಟ್ರಸ್ಟ್ಗಳು ಮತ್ತು ಸದಸ್ಯರು ಕಳಚೆ ಗ್ರಾಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಐವತ್ತು ಫಲಾನುಭವಿಗಳ ಸೊಸೈಟಿ ಖಾತೆಗೆ ಐದು ಲಕ್ಷ ರೂ. ಹಣ ವರ್ಗಾವಣೆ ಬಿಡುಗಡೆ ಗೊಳಿಸಲಾಯಿತು.
ಈ ಕುರಿತು ಸಂತ್ರಸ್ತರಿಗೆ ಮಾಹಿತಿ ಪತ್ರ ವಿತರಿಸಿದ ಶ್ರೀರಂಗ ಕಟ್ಟಿ, ನೈಸರ್ಗಿಕ ಅನಾಹುತದಿಂದ ನೊಂದವರಿಗೆ ಹಾನಿ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ತಲಾ ಐದು ಸಾವಿರದಿಂದ ಇಪ್ಪತೈದು ಸಾವಿರ ರೂ. ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.

ಭೂ ಕುಸಿತದಿಂದ ಕಳಚೆ ಭಾಗದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗಿದ್ದು ಇದಕ್ಕಾಗಿ ಸಂಸ್ಥೆ, ಅಗತ್ಯವಿದ್ದವರಿಗೆ ಒಂದು ಲಕ್ಷ ರೂ. ಬೆಲೆಯ ನೀರಿನ ಪೈಪು ಮತ್ತು ಕಳಚೆಯ ಮಕ್ಕಳ ಶೈಕ್ಷಣಿಕ ವೆಚ್ಚಕ್ಕಾಗಿ ಒಂದು ಲಕ್ಷ ರೂ. ನೀಡುವುದಾಗಿ ಘೋಷಿಸಿದರು.

ಕಳಚೆಯ ಜನರಿಗೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಸಂಸ್ಥೆ  ಸಹಾಯ ಮಾಡುತ್ತಿದ್ದು, ಜನರು ಧೃತಿಗೆಡದೆ ತಮ್ಮ ಬದುಕನ್ನು ಪುನರ್ ಸೃಷ್ಟಿಸಿಕೊಳ್ಳುವಂತಾಗಲಿ ಎಂದು ಅವರು ಹಾರೈಸಿದರು. ಬೆಂಗಳೂರಿನ ಗುಡ್ ಕ್ವೆಸ್ಟ ಫೌಂಡೇಶನ್‌ನ ಪ್ರತಿಮಾ ಹೆಗಡೆ ಕೆರೆತೋಟ ಮತ್ತು ಸಂಗಡಿಗರು ಸಾರ್ವಜನಿಕರಿಗೆ ಅಗತ್ಯವಾದ ಸೋಲಾರ್ ಲ್ಯಾಂಪ್ ಗಳನ್ನು ವಿತರಿಸಿದರು.

ಈ ವೇಳೆ ಟ್ರಸ್ಟಿ ಜನಾರ್ಧನ ಹೆಬ್ಬಾರ ಪ್ರಾಸ್ತಾವಿಕ ಮಾತನಾಡಿ, ಮಾತೃಭೂಮಿ ಸಂಸ್ಥೆಗೆ ಒಂದು ಲಕ್ಷ ರೂ. ದೇಣಿಗೆ ನೀಡುವದಾಗಿ ಘೋಷಿಸಿದರು. ಇದರ ಮೇಲೆ ಬರುವ ಬಡ್ಡಿ ಹಣದಿಂದ ಏಳನೇ ತರಗತಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಗಳಿಸುವ ಕಳಚೆಯ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವದಾಗಿ ತಿಳಿಸಿದರು. ಟ್ರಸ್ಟಿ ಕಮಲಾಕರ ಭಟ್ಟ ವಂದಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಪ್ರೇಮಾನಂದ ನಾಯ್ಕ ಇಡಗುಂದಿ, ಗಣೇಶ ಭಾಗ್ವತ ತೆಲಂಗಾರ ಮುಂತಾದವರು ಉಪಸ್ಥಿತರಿದ್ದರು.

Related