ಏಕದಿನ ಪಂದ್ಯಕ್ಕೆ ರೆಡಿ

ಏಕದಿನ ಪಂದ್ಯಕ್ಕೆ ರೆಡಿ

ಹ್ಯಾಮಿಲ್ಟನ್, ಫೆ. 4 : ಹಿಟ್ಮನ್ ರೋಹಿತ್ ಶರ್ಮಾ ಅನುಪಸ್ಥಿಯಲ್ಲಿ ಭಾರತ ತಂಡ ಗೆಲುವಿನ ಓಟ ಮುಂದುವರಿಸಲು ಇಲ್ಲಿನ ಸೆಡಾನ್ ಪಾರ್ಕ್ ಅಂಗಳದಲ್ಲಿ ನಾಳೆ ಏಕದಿನ ಸರಣಿಯ ಮೊದಲನೇ ಹಣಾಹಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ.
ನಾಯಕ ವಿರಾಟ್ ಕೊಹ್ಲಿಗೆ ಖಂಡಿತವಾಗಿ ಉಪನಾಯಕ ರೋಹಿತ್ ಅವರ ಅನುಪಸ್ಥಿತಿ ಕಾಡಲಿದೆ. ಮತ್ತೊಂದೆಡೆ ನಿಯಮಿತ ನಾಯಕ ಕೇನ್ ವಿಲಿಯಮ್ಸನ್ ಅವರ ಅಲಭ್ಯತೆಯೊಂದಿಗೆ ಕಿವೀಸ್ ಆರಂಭಿಕ ಎರಡು ಪಂದ್ಯಗಳಾಡಲಿದೆ. ರೋಹಿತ್ ಕೊನೆಯ ಟಿ-20 ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರೆ, ಕೇನ್ ಭಾರತದ ವಿರುದ್ಧ ಮೂರನೇ ಟಿ-20 ಹಣಾಹಣಿಯಲ್ಲಿ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದರು. ಆದರೆ, ಟಿ-20 ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿರುವ ವಿಶ್ವಾಸವನ್ನು ಮರೆತು ಕೊಹ್ಲಿ ಪಡೆ ಏಕದಿನ ಸರಣಿಯಲ್ಲಿ ಹೊಸ ಯೋಚನೆಯೊಂದಿಗೆ ಅಂಗಳ ಪ್ರವೇಶಿಸಲಿದೆ. ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಭಾರತ ತವರು ನೆಲದಲ್ಲಿ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಲ್ಲಿ ಏಕದಿನ ಸರಣಿ ಗೆದ್ದು ಬೀಗಿತ್ತು.
ಭಾರತ ತಂಡವನ್ನು ಸ್ಕೋರ್ ಕಾರ್ಡ್ನಲ್ಲಿ ನೋಡಿದಾಗ ಬಲಿಷ್ಠವಾಗಿ ಕಾಣುತ್ತದೆ. ಆದರೆ, ಕ್ರಿಕೆಟ್ ಸ್ಕೋರ್ ಕಾರ್ಡ್ ನೋಡಿ ಆಡುವ ಕ್ರೀಡೆಯಲ್ಲ. ಅನುಭವಿ ಕಿವೀಸ್ ಆಟಗಾರರ ಎದುರು ಅದರಲ್ಲೂ ದ್ವೀಪ ರಾಷ್ಟ್ರದ ಅಂಗಳಗಳಲ್ಲಿ ಭಾರತಕ್ಕೆ ದೊಡ್ಡ ಸವಾಲು ಎದುರಾಗಲಿದೆ. ಬೌಲಿಂಗ್ ವಿಭಾಗವನ್ನು ಜಸ್ಪ್ರಿತ್ ಬುಮ್ರಾ ಮುನ್ನಡೆಸಲಿದ್ದಾರೆ. ಏಕದಿನ ಸರಣಿ ನಿಮಿತ್ತಾ ಸುದ್ದಿಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಅವರು ಪೃಥ್ವಿ ಶಾ ಇನಿಂಗ್ಸ್ ಆರಂಭಿಸಲಿದ್ದಾರೆ. ಕೆ.ಎಲ್ ರಾಹುಲ್ ವಿಕೆಟ್ ಕೀಪಿಂಗ್ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.
“ರೋಹಿತ್ ಶರ್ಮಾ ಏಕದಿನ ಸರಣಿಗೆ ಅಲಭ್ಯರಾಗಿರುವುದು ಅನಿರೀಕ್ಷಿತ. ಈ ಸರಣಿಯ ಬಳಿಕ ಭಾರತಕ್ಕೆ ಯಾವುದೇ ಏಕದಿನ ಸರಣಿ ಇಲ್ಲ. ಹಾಗಾಗಿ, ಅವರು ಚೇತರಿಸಿಕೊಳ್ಳಲು ಸಾಕಷ್ಟು ಸಮಯವಿದೆ. ಪೃಥ್ವಿ ಶಾ ಇನಿಂಗ್ಸ್ ಆರಂಭಿಸಲಿದ್ದಾರೆ. ಕೆ.ಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ,’’ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಕಿವೀಸ್ ಆಯ್ಕೆದಾರ ಗ್ಯಾವಿನ್ ಲಾರ್ಸೆನ್ ಅವರು ಕೇನ್ ವಿಲಿಯಮ್ಸನ್ ಅನುಪಸ್ಥಿಯಲ್ಲಿ ಟಾಮ್ ಲಥಾಮ್ ತಂಡವನ್ನು ಮುನ್ನಡೆಸಲಿದ್ದಾರೆ. ಕೇನ್ ಬದಲು ಮಾರ್ಕ್ ಚಾಪ್ಮನ್ ಅವರಿಗೆ ಅವಕಾಶ ನೀಡಲಾಗಿದೆ. ಇವರು ಭಾರತ ಎ ವಿರುದ್ಧ ಚಾಪ್ಮನ್ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ ಎಂದಿದ್ದಾರೆ.
“ಇದು ಕೇನ್ಗೆ ಭಾರಿ ನಿರಾಶಾದಾಯಕವಾಗಿದೆ. ಆದರೆ, ಈ ಬೇಸಿಗೆಯಲ್ಲಿ ಇನ್ನೂ ಹೆಚ್ಚಿನ ಕ್ರಿಕೆಟ್ ಮುಂದಿರುವಾಗ ನಾವು ಸುರಕ್ಷತೆಯ ಮೊದಲ ವಿಧಾನವನ್ನು ತೆಗೆದುಕೊಳ್ಳಬೇಕು. ಬಲಿಷ್ಠ ಭಾರತ ‘ಎ’ ತಂಡದ ವಿರುದ್ಧ ನ್ಯೂಜಿಲೆಂಡ್ ಎ ಪರ ಸತತ ಶತಕಗಳ ಹಿಂದೆಯೇ ಮಾರ್ಕ್ ಅವರನ್ನು ಏಕದಿನ ರಾಷ್ಟ್ರೀಯ ಹಿರಿಯರ ತಂಡಕ್ಕೆ ಸ್ವಾಗತಿಸುವುದು ಅದ್ಭುತವಾಗಿದೆ. ಹಲವು ಕ್ರಮಾಂಕಗಳಲ್ಲಿ ಬ್ಯಾಟಿಂಗ್ ಮಾಡುವ ಮಾರ್ಕ್ ಚಾಪ್ಮನ್ ಬಹುಮುಖ ಪ್ರತಿಭೆ ಹಾಗೂ ಅವರ ಫೀಲ್ಡಿಂಗ್ ನಿಜಕ್ಕೂ ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರಬಲ್ಲದು,” ಎಂದು ತಿಳಿಸಿದ್ದಾರೆ.

Related