ಎಲ್ಲೆಲ್ಲಿ ಬಿಜೆಪಿ ಶಾಸಕರಿದ್ದಾರೋ ಆ ಪ್ರದೇಶಗಳಲ್ಲಿ ಮಾತ್ರ ಸಮಸ್ಯೆ ಎದುರಾಗಿದೆ: ಡಿಕೆಶಿ 

ಎಲ್ಲೆಲ್ಲಿ ಬಿಜೆಪಿ ಶಾಸಕರಿದ್ದಾರೋ ಆ ಪ್ರದೇಶಗಳಲ್ಲಿ ಮಾತ್ರ ಸಮಸ್ಯೆ ಎದುರಾಗಿದೆ: ಡಿಕೆಶಿ 

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು (ಬುಧವಾರ ಮೇ 21) ರಂದು ಬೆಂಗಳೂರು ನಗರದಲ್ಲಿ ಮಳೆ ಹಾನಿಗೆ ಉಂಟಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ನಗರದಲ್ಲಿ ಮಳೆಯಿಂದ ಇಷ್ಟೆಲ್ಲಾ ತೊಂದರೆ ಅನುಭವಿಸುತ್ತಿರುವುದು ಹಿಂದೆ ಇದ್ದ ಬಿಜೆಪಿ ಸರ್ಕಾರದ ಕೆಲಸಗಳೇ ಇದಕ್ಕೆ ದೊಡ್ಡ ಕಾರಣವೆಂದು ಟೀಕಿಸಿದ್ದಾರೆ.

ಒತ್ತುವರಿ ವಿಚಾರದಲ್ಲಿ ಅವರ ಕಾಲದಲ್ಲಿ ಏನು ಕೆಲಸ ಮಾಡುತ್ತಿದ್ದರು. ಒತ್ತುವರಿ ಮಾಡಿಕೊಂಡವರು ನ್ಯಾಯಾಲಯಗಳಿಂದ ತಡೆಯಾಜ್ಞೆ ತಂದಿದ್ದಾರೆ ಆದರೂ ನಾನು ಒತ್ತುವರಿಗಳನ್ನು ತೆರವುಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಳೆ ನೀರಿನಿಂದ ತೊಂದರೆಗೆ ಒಳಗಾಗುತ್ತಿದ್ದ 211 ಪ್ರದೇಶಗಳನ್ನು ಗುರುತಿಸಿ 166 ಕ್ಕೆ ಇಳಿಸಿದ್ದೇವೆ. 44 ಕೆಲಸ ಬಾಕಿಯಿದ್ದು, ಇದರಲ್ಲಿ 24 ಕಡೆ ಕಾರ್ಯಪ್ರಗತಿಯಲ್ಲಿದೆ. ಮೊದಲಿಗಿಂತ ಈಗ ಸಮಸ್ಯೆಗಳನ್ನು ಎದುರಿಸುತ್ತಿರುವ ಪ್ರದೇಶಗಳ ಪ್ರಮಾಣ ಕಡಿಮೆಯಾಗಿದೆ.

ಬೆಂಗಳೂರು ನಾಗರೀಕರ ರಕ್ಷಣೆ ಮಾಡಲಾಗುವುದು ಯಾರೂ ಆತಂಕಪಡುವ ಅಗತ್ಯವಿಲ್ಲ. ನಾವು ಬೆಂಗಳೂರಿಗೆ ಹೊಸ ರೂಪ ನೀಡುತ್ತಿದ್ದೇವೆ, ನಮ್ಮ ಸರ್ಕಾರ ಹಾಗೂ ಅಧಿಕಾರಿಗಳ ತಂಡ ಇದನ್ನು ಸರಿ ಮಾಡುತ್ತೇವೆ ಎಂದು ಹೇಳಿದರು. ಎಲ್ಲೆಲ್ಲಿ ಬಿಜೆಪಿ ಶಾಸಕರಿದ್ದಾರೋ ಆ ಪ್ರದೇಶಗಳಲ್ಲಿ ಮಾತ್ರ ಇಂತಹ ಸಮಸ್ಯೆ ಎದುರಾಗಿದೆ. ಅವರು ಯಾವುದೇ ಕೆಲಸ ಮಾಡಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಕಾಂಗ್ರೆಸ್ ಶಾಸಕರು ಕಾಮಗಾರಿಗಳನ್ನು ಬೇಗ ಮುಗಿಸಿ ತಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆ ಬಗೆಹರಿಸಿದ್ದಾರೆ. ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಕ್ಷೇತ್ರದಲ್ಲೂ ಪರಿಶೀಲನೆ ಮಾಡಿದ್ದೇವೆ. ಅವರು ಈ ಭಾಗದ ರಸ್ತೆ ಅಗಲೀಕರಣ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ಮಹದೇವಪುರಕ್ಕೆ ಸಿಎಂ, ಡಿಸಿಎಂ ಭೇಟಿ

ಈ ವಿಚಾರವಾಗಿ ಎಲ್ಲೆಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸಮಸ್ಯೆಯಾಗಿದೆ, ಆ ಜಾಗಗಳ ಫೋಟೋ, ವಿಡಿಯೋ ಮಾಡಿಕೊಂಡು ತುರ್ತು ವರದಿ ಸಲ್ಲಿಕೆ ಮಾಡುವಂತೆ ತಿಳಿಸಿದ್ದೇನೆ. ಆ ಮೂಲಕ ವಿಪತ್ತು ನಿರ್ವಹಣೆ ನಿಯಂತ್ರಣ ಅಡಿಯಲ್ಲಿ ರಸ್ತೆ ಅಗಲೀಕರಣ ಮಾಡಲಾಗುವುದು. ಲಿಂಬಾವಳಿ ಅವರು 150 ಅಡಿ ರಸ್ತೆ ಬಗ್ಗೆ ಪ್ರಸ್ತಾವನೆ ಮಾಡಿದ್ದು, ಕೂಡಲೇ ಅಧಿಕಾರಿಗಳ ಜತೆ ಚರ್ಚೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

 

Related