ರಾಜ್ಯದಲ್ಲಿ ತುಂಬಿ ಹರಿಯುತ್ತಿರುವ ನದಿಗಳು

ರಾಜ್ಯದಲ್ಲಿ ತುಂಬಿ ಹರಿಯುತ್ತಿರುವ ನದಿಗಳು

ಬೆಂಗಳೂರು, ಆಗಸ್ಟ್ 8: ರಾಜ್ಯಾದ್ಯಂತ ಎಡಬಿಡದೆ ಮಳೆ ಸುರಿಯುತ್ತಿದ್ದು, ಬಹುತೇಕ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಜಲಾಶಯಗಳಿಗೆ ದಾಖಲೆಯ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಬಹುತೇಕ ಎಲ್ಲಾ ಜಲಾಶಗಳು ಭರ್ತಿಯಾಗಿವೆ, ಹೆಚ್ಚುವರಿ ನೀರನ್ನು ನದಿಗಳಿಗೆ ಹರಿಸಲಾಗುತ್ತಿದ್ದು ಹಲವು ಪ್ರದೇಶಗಳಲ್ಲಿ ನೆರೆ ಭೀತಿ ಎದುರಾಗಿದೆ.

ಕರ್ನಾಟಕದ ಹಲವು ಭಾಗಗಳಲ್ಲಿ ವಿಶೇಷವಾಗಿ ತುಂಗಾ ಮತ್ತು ತುಂಗಭದ್ರಾ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಮತ್ತು ವಿಜಯನಗರ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ನೀರಿನ ಒಳಹರಿವು ಹಿನ್ನೆಲೆಯಲ್ಲಿ ತುಂಗಭದ್ರಾ ಅಣೆಕಟ್ಟಿನಿಂದ ಕನಿಷ್ಠ 100,000 ಕ್ಯೂಸೆಕ್ ನೀರನ್ನು ತುಂಗಭದ್ರಾ ನದಿಗೆ ಬಿಡಲಾಗಿದೆ.

1,633 ಅಡಿ ಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಅಣೆಕಟ್ಟಿನಲ್ಲಿ ಈಗಾಗಲೇ ನೀರಿನ ಮಟ್ಟ 1,631 ಅಡಿ ತಲುಪಿದೆ. ನೀರಿನ ಮಟ್ಟದಲ್ಲಿ ಸಮತೋಲನ ಕಾಯ್ದುಕೊಳ್ಳಲು ಒಂದು ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದ್ದು, ತುಂಗಭದ್ರಾ ಅಣೆಕಟ್ಟಿನ ಕೆಳಭಾಗದಲ್ಲಿ ವಾಸಿಸುವ ಜನರಲ್ಲಿ ಪ್ರವಾಹ ಭೀತಿ ಉಂಟಾಗಿದೆ. ನದಿ ಹರಿಯುವ ಪ್ರದೇಶದಲ್ಲಿರುವ ಸ್ಥಳೀಯರಿಗೆ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಭಾನುವಾರ ಕೂಡ ಮೋಡ ಕವಿದ ವಾತಾವರಣವಿತ್ತು. ಅಲ್ಲಲ್ಲಿ ಚದುರಿದ ಮಳೆಯಾಗಿದೆ. ಸೋಮವಾರ ಕೂಡ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

33 ದ್ವಾರಗಳ ಪೈಕಿ 30 ಗೇಟ್‌ಗಳನ್ನು ಭಾನುವಾರ ತೆರೆಯಲಾಗಿದ್ದು, ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯದ ಅನೇಕ ಪಾರಂಪರಿಕ ತಾಣಗಳು ಮುಳುಗಿವೆ.

ಭದ್ರಾವತಿ, ಘಟಪ್ರಭಾ, ಮಲಪ್ರಭಾ, ಕೃಷ್ಣಾ, ಕಾವೇರಿ, ಕಬಿನಿ, ಹೇಮಾವತಿ, ಸೂಪಾ ಮತ್ತು ವಾರಾಹಿ ಮತ್ತು ಅವುಗಳ ಅಂಗ ನದಿಗಳು ಉಕ್ಕಿ ಹರಿಯುತ್ತಿವೆ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

 

Related