ಹೊಸ ರೈಲ್ವೆ ಮಾರ್ಗ, ಅಂತಿಮ ಸ್ಥಳ ಸಮೀಕ್ಷೆ: ಕೆ.ಸುಧಾಕರ್‌

ಹೊಸ ರೈಲ್ವೆ ಮಾರ್ಗ, ಅಂತಿಮ ಸ್ಥಳ ಸಮೀಕ್ಷೆ: ಕೆ.ಸುಧಾಕರ್‌

ಚಿಕ್ಕಬಳ್ಳಾಪುರ: ಹೊಸದಾಗಿ ಚಿಕ್ಕಬಳ್ಳಾಪುರ-ಗೌರಿಬಿದನೂರು ರೈಲ್ವೆ ಮಾರ್ಗ ನಿರ್ಮಾಣ, ಯಲಹಂಕ-ಚಿಕ್ಕಬಳ್ಳಾಪುರ ನಡುವೆ ಮಾರ್ಗದ ಡಬಲಿಂಗ್ ಕಾಮಗಾರಿ, ಬಂಗಾರಪೇಟೆ-ಯಲಹಂಕ ನಡುವೆ ವಿದ್ಯುದೀಕರಣ ಸೇರಿದಂತೆ ರೈಲ್ವೆ ಇಲಾಖೆಗೆ ಸಂಬಂಧಿಸಿದ ಪ್ರಮುಖ ಯೋಜನೆ ಹಾಗೂ ಕಾಮಗಾರಿಗಳನ್ನು ಶೀಘ್ರ ಆರಂಭ ಹಾಗೂ ಪೂರ್ಣಗೊಳಿಸಬೇಕೆಂದು ಸಂಸದ ಡಾ.ಕೆ.ಸುಧಾಕರ್‌ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಸಂಸದ ಡಾ.ಕೆ.ಸುಧಾಕರ್‌ ಮಂಗಳವಾರ ನವದೆಹಲಿಯಲ್ಲಿ ಭೇಟಿ ಮಾಡಿ, ವಿವಿಧ ಯೋಜನೆ ಹಾಗೂ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸ ರೈಲ್ವೆ ಮಾರ್ಗಗಳ ನಿರ್ಮಾಣ, ಅಂತಿಮ ಸ್ಥಳ ಸಮೀಕ್ಷೆ (FSL), ವಿದ್ಯುದೀಕರಣ, ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳ ನಿರ್ಮಾಣ, ಉಪನಗರ ರೈಲು ಮೊದಲಾದ ಕಾಮಗಾರಿಗಳ ಬಗ್ಗೆ ಸಂಸದ ಡಾ.ಕೆ.ಸುಧಾಕರ್‌ ಚರ್ಚಿಸಿ ಮನವಿ ಪತ್ರ ಸಲ್ಲಿಸಿದರು. ಇದನ್ನೂ ಓದಿ: ಕ್ಷೇತ್ರದ 2 ಕಡೆ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ, ತಲಾ 50 ಕೋಟಿ ಅನುದಾನ

ಇದಕ್ಕೆ ಸ್ಪಂದಿಸಿರುವ ಸಚಿವ ವಿ.ಸೋಮಣ್ಣ, ಕಾಮಗಾರಿಗಳ ಸಾಧ್ಯಾಸಾಧ್ಯತೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲು ರೈಲ್ವೆ ಭವನದಲ್ಲಿ ಬುಧವಾರ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಿದರು. ಸಭೆಯಲ್ಲಿ ಸಂಸದ ಡಾ.ಕೆ.ಸುಧಾಕರ್‌ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಹೊಸ ಮಾರ್ಗಗಳು

ಚಿಕ್ಕಬಳ್ಳಾಪುರ-ಗೌರಿಬಿದನೂರು ನಡುವೆ 44 ಕಿ.ಮೀ, ಉದ್ದದ ಮಾರ್ಗ, ಶ್ರೀನಿವಾಸಪುರ-ಮದನಪಲ್ಲಿ ನಡುವೆ 75 ಕಿ.ಮೀ. ಉದ್ದದ ಮಾರ್ಗ, ಮಾರಿಕುಪ್ಪಂ-ಕುಪ್ಪಂ ನಡುವೆ 23.7 ಕಿ.ಮೀ. ಉದ್ದದ ಮಾರ್ಗ ನಿರ್ಮಾಣದ ಯೋಜನೆಗಳನ್ನು ಪರಿಗಣಿಸಲು ಸಂಸದ ಡಾ.ಕೆ.ಸುಧಾಕರ್‌ ಮನವಿ ಮಾಡಿದರು. ಹಾಗೆಯೇ, ಚಿಕ್ಕಬಳ್ಳಾಪುರ-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ (ಪುಟ್ಟಪರ್ತಿ) ನಡುವಿನ 103 ಕಿ.ಮೀ. ಮಾರ್ಗದ ಸಮೀಕ್ಷೆಯನ್ನು 10 ವರ್ಷಗಳ ಹಿಂದೆ ಮಾಡಿದ್ದು, ಮುಂದೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಗಮನಹರಿಸಬೇಕೆಂದು ಕೋರಿದರು.

ಉಪನಗರ ರೈಲು ಯೋಜನೆಯಡಿಯ 47 ಕಿ.ಮೀ. ಉದ್ದದ ರಾಜನುಕುಂಟೆ–ಯಲಹಂಕ–ಹೀಲಲಿಗೆ (ಕಾರಿಡಾರ್ – 4) ಮಾರ್ಗ ಹಾಗೂ 42 ಕಿ.ಮೀ. ಉದ್ದದ ದೇವನಹಳ್ಳಿ-ಯಲಹಂಕ-ಯಶವಂತಪುರ (ಕಾರಿಡಾರ್-1) ಮಾರ್ಗದ ಕಾಮಗಾರಿಯನ್ನು ವೇಗಗೊಳಿಸಬೇಕು. ಯಲಹಂಕ-ದೇವನಹಳ್ಳಿ ಮಾರ್ಗದ (23.7 ಕಿ.ಮೀ) ಡಬ್ಲಿಂಗ್, ಬೆಟ್ಟಹಲಸೂರು-ರಾಜಾನುಕುಂಟೆ ಮಾರ್ಗದ ನಿರ್ಮಾಣ, (6.14 ಕಿ.ಮೀ.), ಚಿಕ್ಕಬಳ್ಳಾಪುರ-ಗೌರಿಬಿದನೂರು (44 ಕಿ.ಮೀ.) ಹೊಸ ಮಾರ್ಗ ಹಾಗೂ ದೇವನಹಳ್ಳಿ-ಬಂಗಾರಪೇಟೆ-ಕೋಲಾರ (125 ಕಿಮೀ) ಡಬ್ಲಿಂಗ್ ಕಾಮಗಾರಿಗಾಗಿ ಅಂತಿಮ ಸ್ಥಳ ಸಮೀಕ್ಷೆ (FSL) ನಡೆಯಬೇಕಿದ್ದು, ಈ ಕುರಿತು ಕ್ರಮ ವಹಿಸಬೇಕೆಂದು ಸಂಸದರು ಮನವಿ ಮಾಡಿದರು.

ಯಲಹಂಕ-ಚಿಕ್ಕಬಳ್ಳಾಪುರ ಮಾರ್ಗ ಹಾಗೂ ದೊಡ್ಡಬಳ್ಳಾಪುರ-ಚಿಕ್ಕಬಳ್ಳಾಪುರ ಮಾರ್ಗದ ಡಬಲಿಂಗ್‌, ಬಂಗಾರಪೇಟೆ-ಯಲಹಂಕ ಮಾರ್ಗದ (149 ಕಿ.ಮೀ.) ವಿದ್ಯುದೀಕರಣಕ್ಕಾಗಿ ಕ್ರಮ ಕೈಗೊಳ್ಳಬೇಕೆಂದು ಸಂಸದರು ಕೋರಿದರು.

 

Related