ಪಿರಿಯಾಪಟ್ಟಣ: ಇತಿಹಾಸ ಪ್ರಸಿದ್ಧ ಶ್ರೀ ಮಸಣಿಕಮ್ಮ ದೇವಾಲಯದ ಜೀರ್ಣೋದ್ಧಾರ ಕಾರ್ಯ ಆಂರಭಿಸಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಐತಿಹಾಸಿಕ ಹಿನ್ನೆಲೆಯುಳ್ಳ ಪಿರಿಯಾಪಟ್ಟಣದ ಶ್ರೀ ಮಸಣಿಕಮ್ಮ ದೇವಾಲಯದ ಜೀರ್ಣೋದ್ಧಾರ ನಡೆಸಲು ಸರ್ಕಾರದಿಂದ 6 ಕೋಟಿ ಹಣ ಮಂಜೂರಾಗಿದ್ದು, ಇನ್ನುಳಿದ 3 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿದ್ದು, ಶೀಘ್ರದಲ್ಲೇ ದೇವಾಲಯದ ಜೀರ್ಣೋದ್ಧಾರ ಕೆಲಸ ಆರಂಭಿಸಲಾಗುವುದು ದೇವಾಲಯ ನಿರ್ಮಾಣಕ್ಕೆ ಅಗತ್ಯವಾದ ಹಣ ಈಗಾಗಲೇ ಮುಜರಾಯಿ ಇಲಾಖೆ ಖಾತೆಯಲ್ಲಿದ್ದು ದೇವಾಲಯದ ಜೀರ್ಣೋದ್ಧಾರ ಆರಂಭಿಸಿ ಸಾರ್ವಜನಿಕರಿಂದ ಸಂಗ್ರಹವಾಗುವ ವಂತಿಕೆ ಹಣದ ಜೊತೆಗೆ ಉಳಿಕೆ ಹಣವನ್ನು ದೇವಾಲಯದ ನಿಧಿಯಿಂದ ಬಳಸಿಕೊಳ್ಳಲಾಗುವುದು ಎಂದರು. ಇದನ್ನೂ ಓದಿ: ಚೆಕ್ ಪೋಸ್ಟ್ ಗಳಲ್ಲಿ ಖಾಸಗಿ ವ್ಯಕ್ತಿಗಳ ದರ್ಬಾರಿಗೆ ಬ್ರೇಕ್ ಹಾಕಲು ಮುಂದಾದ ಸಾರಿಗೆ ಸಚಿವರು!
ಸಚಿವ ಕೆ.ವೆಂಕಟೇಶ್ ಮಾತನಾಡಿ, ತಾಲೂಕಿನಲ್ಲಿ ಕುಸುಮ್ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಜಾಗದ ಅವಶ್ಯಕತೆ ಇದ್ದು, ಅರಣ್ಯ ಪ್ರದೇಶವಲ್ಲದ, ಜನ ಬಿಡದಿ ಪ್ರದೇಶದಿಂದ ದೂರವಿರುವ ಪ್ರದೇಶದಲ್ಲಿ ಜಾಗವನ್ನು ಗುರುತಿಸಿಕೊಡಲು ಅರಣ್ಯ ಹಾಗೂ ಕಂದಾಯ ಇಲಾಖೆಗಳು ಒಟ್ಟಿಗೆ ಸೇರಿ ಸರ್ವೆ ನಡೆಸಿ ಜಾಗವನ್ನು ಗುರುತಿಸಿ ಕೊಡುವಂತೆ ಸೂಚನೆ ನೀಡಿದ ಅವರು, ಸರ್ಕಾರದ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುತ್ತಿರುವ ರಾಗಿ ಖರೀದಿ ಕೇಂದ್ರಗಳಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದೆ, ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಬೇಕು, ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ವಿವರವನ್ನು ಫ್ರೂಟ್ ಐಡಿಯಲ್ಲಿ ನಮೂದಿಸಿರುತ್ತಾರೆ ಹಾಗಾಗಿ ಅವರು ಎಷ್ಟು ಎಕರೆ ಪ್ರದೇಶದಲ್ಲಿ ರಾಗಿ ಬೆಳೆದಿದ್ದಾರೆಯೋ ಅಷ್ಟು ರಾಗಿಯನ್ನು ಖರೀದಿ ಮಾಡಲು ಅವರಿಗೆ ಅವಕಾಶ ನೀಡಬೇಕು ಅಲ್ಲದೆ ದಲ್ಲಾಳಿಗಳು, ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಸೂಚಿಸಿದರು .
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಚೆಸ್ಕಾಂ ಎಂಡಿ ಶೋಭಾ, ಉಪ ವಿಭಾಗಾಧಿಕಾರಿ ವಿಜಯಕುಮಾರ್, ತಹಶೀಲ್ದಾರ್ ನಿಸರ್ಗ ಪ್ರಿಯಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.