ಶ್ರೀಮಂತ ಪಾಟೀಲ್‌ಗೆ ‘ಮೇಡ್‌ಇನ್ ಜಪಾನ್’

ಶ್ರೀಮಂತ ಪಾಟೀಲ್‌ಗೆ ‘ಮೇಡ್‌ಇನ್ ಜಪಾನ್’

ಬೆಂಗಳೂರು, ಫೆ. 14: ಸಚಿವ ಸಂಪುಟ ವಿಸ್ತರಣೆ ಸರ್ಕಸ್ ಮುಗಿಯಿತು. ಈಗ ನೂತನ ಸಚಿವರ ಇಂಥದ್ದೇ ಕಾರು ಬೇಕೆಂದು ಪಟ್ಟು ಹಿಡಿದಿದ್ದಾರೆ.

ಸಚಿವ ಶ್ರೀಮಂತ ಪಾಟೀಲ್ ಅವರು ತಮಗೆ ಮೇಡ್‌ಇನ್ ಜಪಾನ್ ಇಂಜಿನ್ ಇರುವ ಇನ್ನೋವಾ ಕಾರು ಬೇಕು ಎಂದು ಹಠ ಹಿಡಿದಿದ್ದಾರೆ.

ಶ್ರೀಮಂತ ಪಾಟೀಲ್ ಅವರಿಗೆ ಡಿಪಿಆರ್‌ನಿಂದ ಕೆಎ-51 ಜಿ- 9333 ಸಂಖ್ಯೆಯ 2012ರ ಮಾಡೆಲ್‌ನ ಬಿಳಿ ಬಣ್ಣದ ಇನ್ನೋವಾ ಕಾರು ನೀಡಲಾಗಿದೆ. 2015ರ ಮಾಡೆಲ್ ಇನ್ನೋವಾ ಕಾರಿನ ಇಂಜಿನ್ ಮೇಡ್‌ಇನ್ ಇಂಡಿಯಾದ್ದು, ಆದರೆ ಶ್ರೀಮಂತ ಪಾಟೀಲ್ ಅವರು ಮೇಡ್‌ಇನ್ ಇಂಡಿಯಾ ಇಂಜಿನ್ ಕಾರು ಬೇಡ ನನಗೆ ಮೇಡ್ ಇನ್ ಜಪಾನ್ ಇಂಜಿನ್ ಇರುವ ಇನ್ನೋವಾ ಕಾರು ಬೇಕು ಎಂದು ಹಠ ಹಿಡಿದಿದ್ದಾರೆ.

ಎಲ್ಲಾ ಸಚಿವರು ಹೊಸ ಕಾರು ಬೇಕು ಎಂದರೆ ಶ್ರೀಮಂತ ಪಾಟೀಲ್ ಮಾತ್ರ ಇನ್ನೂ ಹಳೆ ಮಾಡೆಲ್ ಕಾರು ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. 2015ಕ್ಕೂ ಮೊದಲಿನ ಇನ್ನೋವಾ ಕಾರುಗಳ ಇಂಜಿನ್ ಮೇಡ್‌ಇನ್ ಜಪಾನ್. ನನಗೆ ಅದೇ ಕಾರು ಬೇಕು ಎಂದು 7 ದಿನಗಳ ಕಾಲ ಸತತವಾಗಿ ಕಾರು ಹುಡುಕಿಸಿದ್ದಾರೆ. ಜಪಾನ್ ಮೇಡ್ ಇಂಜಿನ್ ಆದರೆ ಹೆವಿ ಲೋಡ್ ತಡೆಯುತ್ತೆ. ಜೊತೆಗೆ ಓಡಾಟವು ಆರಾಮದಾಯಕವಾಗಿರುತ್ತೆ. ಹೆಚ್ಚು ಶಬ್ಧವೂ ಇರಲ್ಲ ಎನ್ನುವುದು ಸಚಿವ ಶ್ರೀಮಂತ ಪಾಟೀಲ್ ಅವರ ವಾದ.

ಜಪಾನ್ ಮೇಡ್ ಇನ್ ಇಂಜಿನ್‌ಗಾಗಿ ಹುಡುಕಿ ಹುಡುಕಿ ಸುಸ್ತಾದ ಡಿಪಿಆರ್ ಅಧಿಕಾರಿಗಳು ಕೊನೆಗೂ ಕಾರನ್ನು ಹುಡುಕಿ ಕೊಟ್ಟಿದ್ದಾರೆ. ಕೆಎ-04 ಜಿಎ- 9 ಸಂಖ್ಯೆಯ 2013ರ ಮಾಡೆಲ್‌ನ ಗ್ರೇ ಕಲರ್ ಇನ್ನೋವಾ ಹುಡುಕಿ ಗುರುವಾರ ಸಚಿವರಿಗೆ ತೋರಿಸಿದ್ದಾರೆ.  2015ರ ಮಾಡೆಲ್‌ಗಿಂತ 2 ವರ್ಷ ಹಳಯದಾದ 2013ರ ಮಾಡೆಲ್ ಕಾರು ಕಂಡು ಶ್ರೀಮಂತ ಪಾಟೀಲ್ ಫುಲ್ ಫಿದಾ ಆಗಿದ್ದಾರೆ.

ಒಂದು ವಾರ ಕಾಲ ಡಿಪಿಎಆರ್ ಅಧಿಕಾರಿಗಳ ನೆಮ್ಮದಿ ಕೆಡಿಸಿದ್ದ ಸಚಿವರು ಕೊನೆಗೂ ಮೇಡ್ ಇನ್ ಜಪಾನ್ ಕಾರು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Related