ಹಿರಿಯ ಮುಖಂಡ ಎಂ.ಸಿ.ನಾಣಯ್ಯ ಜೊತೆ ಸೌಹಾರ್ದಯುತ ಮಾತುಕತೆ

ಹಿರಿಯ ಮುಖಂಡ ಎಂ.ಸಿ.ನಾಣಯ್ಯ ಜೊತೆ ಸೌಹಾರ್ದಯುತ ಮಾತುಕತೆ

ಕೊಡಗು: ಅನೇಕ ವರ್ಷಗಳ ಕಾಲ ಸಹಕಾರಿ ಕ್ಷೇತ್ರ ಹಾಗೂ ಸಹಕಾರಿ ಧುರೀಣರಿಗೆ ಮಾರ್ಗದರ್ಶನ ನೀಡುತ್ತಾ ಬಂದಿರುವ ಹಿರಿಯ ಮುಖಂಡರಾದ ಎಂ.ಸಿ. ನಾಣಯ್ಯ ಅವರನ್ನು ಭೇಟಿ ಮಾಡಿ ಸಲಹೆ ಪಡೆದಿದ್ದೇನೆ. ಜೊತೆಗೆ ಅವರು ನನ್ನ ಗುರುವೂ ಆಗಿದ್ದಾರೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.
ನಾಣಯ್ಯ ಅವರನ್ನು ಭೇಟಿ ಮಾಡುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಸಹಕಾರ ಕ್ಷೇತ್ರದಲ್ಲಿ ಅವರಿಗೆ ಸಾಕಷ್ಟು ಜ್ಞಾನವಿದೆ. ಕೆಲವೊಮ್ಮೆ ಸರ್ಕಾರದಿಂದ ತಪ್ಪಾದಾಗ ಕಿವಿ ಹಿಂಡುವ ಕೆಲಸವನ್ನೂ ಅವರು ಮಾಡುತ್ತಾ ಬಂದಿದ್ದಾರೆ. ಇಂತಹ ಹಿರಿಯರ ಮಾರ್ಗದರ್ಶನ ಪಡೆಯುವುದಷ್ಟೇ ಆಗಿದೆ. ಇದೊಂದು ಸೌಹಾರ್ದಯುತ ಭೇಟಿ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ಡಿಕೆಶಿ ಪದಗ್ರಹಣ ಕಾಂಗ್ರೆಸ್‌ನ ಆಂತರಿಕ ವಿಚಾರ
ಕೊರೋನಾ ಸಂಕಷ್ಟಗಳ ಕಾಲದಲ್ಲಿ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ಬಳಸಬೇಕು. ಇನ್ನು ಯಾವುದೇ ಕಾರ್ಯಕ್ರಮ ಮಾಡಿದರೂ ೫೦ರಿಂದ ೧೦೦ ಮಂದಿಯನ್ನು ಮಾತ್ರ ಸೇರಿಸಬಹುದಾಗಿದ್ದು, ಈ ವಿಷಯವನ್ನು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ನೀಡುವಾಗಲೂ ತಿಳಿಸಲಾಗಿದೆ. ಇನ್ನು ಅವರ ಪದಗ್ರಹಣ ವಿಚಾರ ಆ ಪಕ್ಷದ ಆಂತರಿಕ ವಿಷಯಗಳು ಎಂದು ಸಚಿವ ಸೋಮಶೇಖರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Related