ಮೈಸೂರು: ಇಂದಿನಿಂದ ವಿಶ್ವವಿಖ್ಯಾತ ಮೈಸೂರು ದಸರಾ 2024 ಪ್ರಾರಂಭವಾಗಿದ್ದು ಈ ಬಾರಿ ಮೈಸೂರು ದಸರಾ ಉತ್ಸವವನ್ನು ಸಾಹಿತಿ ಹಂಪ ನಾಗರಾಜಯ್ಯ ಅವರು ಉದ್ಘಾಟನೆ ಮಾಡಿ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಇನ್ನು ದಸರಾ ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಅವರು, ಯಾವುದೇ ಪಕ್ಷವಾಗಲಿ ಅದು ಆಡಳಿತದಲ್ಲಿರುವ ಸರಕಾರವನ್ನು ಕೆಡುವ ಕೆಲಸವನ್ನು ಮಾಡಬಾರದು ಎಂದು ಹೇಳಿದ್ದಾರೆ.
ಈಗಿನ ಯುವಕರು ಮೋದಿ ಮೋದಿ ಎಂದು ಮೋದಿಯನ್ನು ಬೆಂಬಲಿಸುತ್ತಿದ್ದಾರೆ. ಆದರೆ ಯಾವ ರಾಜ್ಯದಲ್ಲಿ ಏನಿದೆ ಯಾವ ರಾಜ್ಯಕ್ಕೆ ಯಾರೆಲ್ಲ ಏನು ಮಾಡಿದ್ದಾರೆ ಎಂಬುದು ಎಲ್ಲಾ ಯುವಕರು ಯುವತಿಯರು ಅರಿತಿಕೊಂಡು ಹೋಗಬೇಕೆಂದು ಹೇಳಿದ್ದಾರೆ. ಇದನ್ನೂ ಓದಿ: ಇಂದಿನಿಂದ ದಸರಾ ದರ್ಬಾರ್ ಶುರು
ದಸರಾ ಎಂಬುದು ಮತ ಧರ್ಮಗಳ ತಾರತಮ್ಯ ಇಲ್ಲದ ಸರ್ವ ಜನಾಂಗದ ಹಬ್ಬ. ಆಸ್ತಿಕತೆ, ನಾಸ್ತಿಕತೆ ಎಂಬುದು ದಸರಾದಲ್ಲಿ ಅಪ್ರಸ್ತುತ. ದಸರಾ ಅರಮನೆ ಹಬ್ಬವಲ್ಲ, ಜನ ಆರಿಸಿದ ಸರ್ಕಾರ ನಡೆಸುವ ಹಬ್ಬ ಎಂದು ನಾಗರಾಜಯ್ಯ ಹೇಳಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಎಷ್ಟೇ ಅಡ್ಡಿ ಆತಂಕಗಳು ಎದುರಾಗುತ್ತಿದ್ದರೂ ಎದೆಗುಂದದೆ ಸೆಡ್ಡು ಹೊಡೆದು ಗಟ್ಟಿಯಾಗಿ ನಿಂತಿದ್ದಾರೆ. ಜೀವನವೇ ದೊಡ್ಡ ಅಖಾಡ, ಧೃತಿಗೆಡದೆ ತೊಡೆತಟ್ಟಿ ನಿಲ್ಲಲೇಬೇಕು. ಸಜ್ಜನಿಕೆ, ಸೌಮ್ಯ ಸ್ವಭಾವ ದೌರ್ಬಲ್ಯವಲ್ಲ ಎಂದರು.
ಪ್ರತಿಯೊಬ್ಬರ ಬಾಳಲ್ಲೂ ಕೂಡ ಅಡೆತಡೆಗಳು ಇರುತ್ತವೆ. ಆ ಎಲ್ಲಾ ಅಡೆತಡೆಗಳನ್ನು ಎದುರಿಸಿ ಮೆಟ್ಟಿ ನಿಂತಾಗ ಮಾತ್ರ ಜೀವನ ಸಮೃದ್ಧಿಯಾಗಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.