ಕುಷ್ಠರೋಗ ಮುಕ್ತ ಜಿಲ್ಲೆಗೆ ಮುನ್ನಡೆ – ಸಂಗಪ್ಪ

ಕುಷ್ಠರೋಗ ಮುಕ್ತ ಜಿಲ್ಲೆಗೆ ಮುನ್ನಡೆ – ಸಂಗಪ್ಪ

ಬೆಂಗಳೂರು, ಆಗಸ್ಟ್ 04 : ಕುಷ್ಠರೋಗ ಪ್ರಕರಣ ಪತ್ತೆ ಆಂದೋಲನ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯಾದ್ಯಂತ ಆಗಸ್ಟ್ 16 ರಿಂದ ಸೆಪ್ಟೆಂಬರ್ 3 ರವರಿಗೆ ಒಟ್ಟು 14 ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ ಯಶಸ್ವಿಗೊಳಿಸಬೇಕು. ಈ ಮೂಲಕ ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಗಪ್ಪ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯಲ್ಲಿ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ ಅಂಗವಾಗಿ ಆಯೋಜಿಸಿಲಾಗಿದ್ದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕುಷ್ಠರೋಗ ನಿರ್ಮೂಲನೆ ಕುರಿತು ಅರಿವು ಕಾರ್ಯಕ್ರಗಳನ್ನು ವ್ಯವಸ್ಥಿತವಾಗಿ ಆಯೋಜಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು. ಶಾಲಾ ಕಾಲೇಜುಗಳಲ್ಲಿ ಕುಷ್ಠರೋಗ ಕುರಿತು ಜಾಗೃತಿ ಮೂಡಿಸಬೇಕು. ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಆಂದೋಲನ ಅವಧಿಯಲ್ಲಿ ಮನೆ-ಮನೆಗೆ ಭೇಟಿ ನೀಡಿ, ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ರೋಗಿಗಳನ್ನು ಪತ್ತೆಹಚ್ಚಿ ಅವರಿಗೆ ಚಿಕಿತ್ಸೆ ಕೊಡಿಸಬೇಕು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಬಿ.ಎಸ್. ಅವರು ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 418327 ಮನೆಗಳಿದ್ದು, ಕುಷ್ಠರೋಗ ಪತ್ತೆಗಾಗಿ ಒಟ್ಟು 1195 ತಂಡಗಳನ್ನು ರಚಿಸಲಾಗಿದೆ. ಪ್ರತಿಯೊಂದು ತಂಡದಲ್ಲಿ ಒಬ್ಬ ಆಶಾ ಕಾರ್ಯಕರ್ತೆ, ಸ್ವಯಂ ಸೇವಕರು ಭಾಗವಹಿಸಲಿದ್ದಾರೆ. ಪ್ರತಿ ಐದು ತಂಡಕ್ಕೆ ಒಬ್ಬರು ಮೇಲ್ವಿಚಾರಕರಂತೆ ಒಟ್ಟು 239 ಮೇಲ್ವಿಚಾರಕರರು ಇರಲಿದ್ದಾರೆ. ಆನೇಕಲ್, ಬೆಂಗಳೂರು ಪೂರ್ವ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಒಟ್ಟು ನಾಲ್ಕು ತಾಲೂಕುಗಳಲ್ಲಿ ಈ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಕುಷ್ಠರೋಗ ಕುರಿತು ಜಾಗೃತಿ ಮೂಡಿಸುವ ಭಿತ್ತಿಪತ್ರವನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಕುಷ್ಟರೋಗ ನಿಯಂತ್ರಣ ಅಧಿಕಾರಿ ಡಾ. ನಾಗರಾಜ್ ಎಂ.ಜಿ, ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Related