ಕರ್ನಾಟಕದಲ್ಲಿ ಗ್ಯಾರಂಟಿ ಅನುಷ್ಠಾನದ ಬಗ್ಗೆ ಮಹಾಯುತಿ ನಾಯಕರು ಅಧ್ಯಯನ ಮಾಡಲಿ: ಡಿಕೆಶಿ

ಕರ್ನಾಟಕದಲ್ಲಿ ಗ್ಯಾರಂಟಿ ಅನುಷ್ಠಾನದ ಬಗ್ಗೆ ಮಹಾಯುತಿ ನಾಯಕರು ಅಧ್ಯಯನ ಮಾಡಲಿ: ಡಿಕೆಶಿ

ಮುಂಬೈ: ಗ್ಯಾರಂಟಿ ಯೋಜನೆಗಳು ಜಾರಿಗೂ ಮುನ್ನ ಕರ್ನಾಟಕದ ಜಿಡಿಪಿ ಶೇ 8.2 ರಷ್ಟಿತ್ತು. ಈಗ ಶೇ 10.2 ರಷ್ಟಿದೆ. ಇದು ನನ್ನ ಲೆಕ್ಕಾಚಾರವಲ್ಲ, ಭಾರತ ಸರ್ಕಾರದ ವಿವಿಧ ಸಂಸ್ಥೆಗಳ ಲೆಕ್ಕಾಚಾರ ಎಂದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

ಮುಂಬೈನ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಯಶಸ್ಸಿನ ಬಗ್ಗೆ ಖುದ್ದು ಜನರಿಂದ ಮಾಹಿತಿ ಪಡೆಯಲು ಮಹಾರಾಷ್ಟ್ರದ ಮಹಾಯುತಿ (ಬಿಜೆಪಿ ಮಿತ್ರ ಪಕ್ಷಗಳು) ನಾಯಕರು ಭೇಟಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ವಿಶೇಷ ಬಸ್ ಹಾಗೂ ವಿಮಾನದ ವ್ಯವಸ್ಥೆ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಹಿರಂಗ ಸವಾಲು ಹಾಕಿದರು. ಇದನ್ನೂ ಓದಿ: ವಿವಿಧ ಕಾಮಗಾರಿಗಳಿಗೆ ಚಾಲನೆ

ಬಿಜೆಪಿಯು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವಿಚಾರವಾಗಿ ಪತ್ರಿಕೆಗಳಿಗೆ ಸುಳ್ಳು ಜಾಹೀರಾತು ನೀಡಿತ್ತು. ಈ ಸುಳ್ಳನ್ನು ಬಯಲು ಮಾಡಲು ನಾವು ಮಹಾರಾಷ್ಟ್ರಕ್ಕೆ ಬಂದಿದ್ದೇವೆ. ಯಾವುದೇ ಸಮಯದಲ್ಲಿ ಮಹಾಯುತಿ ನಾಯಕರು ರಾಜ್ಯಕ್ಕೆ ಭೇಟಿ ನೀಡಬಹುದು. ನೇರವಾಗಿ ಜನರ ಬಳಿಗೆ ಬಂದು ಚರ್ಚೆ ಮಾಡಬಹುದು. ನಾನೇ ಖುದ್ದಾಗಿ ನಿಂತು ಈ ವ್ಯವಸ್ಥೆ ಮಾಡಿಕೊಡುತ್ತೇನೆ. ಎಂದು ಸವಾಲು ಹಾಕಿದರು.

ಸುಳ್ಳಿನ ವಿರುದ್ಧ ಕಾನೂನಾತ್ಮಕ ಹೋರಾಟ

ಗ್ಯಾರಂಟಿ ವಿಚಾರವಾಗಿ ಸುಳ್ಳು ಹಬ್ಬಿಸಿದ ಪಕ್ಷಗಳ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುವ ಕುರಿತು ನಾವು ಯೋಚನೆ ಮಾಡುತ್ತಿದ್ದೇವೆ. ನುಡಿದಂತೆ ನಡಿದ ನಮ್ಮ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ. ಇವರೆಲ್ಲ ದೇಶದ ಮಹಾನ್ ಸುಳ್ಳುಗಾರರು ಎಂದು ಕಿಡಿಕಾರಿದರು.

ನಮ್ಮ ಯೋಜನೆಗಳ ಬಗ್ಗೆ ಆರೋಪ ಮಾಡಿ, ಮಹಾರಾಷ್ಟ್ರದ ಜನತೆಗೆ ಕಾಂಗ್ರೆಸ್ ಪಕ್ಷದ ಬದ್ಧತೆ ಹಾಗೂ ಕೆಲಸಗಳ ಬಗ್ಗೆ ಸತ್ಯವನ್ನು ತಿಳಿಸಲು ಅವಕಾಶ ಮಾಡಿಕೊಟ್ಟ ಮಹಾರಾಷ್ಟ್ರದ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಿಗೆ ಧನ್ಯವಾದಗಳು” ಎಂದರು.

ಬಿಜೆಪಿಯಿಂದ ಗ್ಯಾರಂಟಿ ಯೋಜನೆಗಳ ನಕಲು

ಪ್ರಧಾನಿ ಮೋದಿ ಅವರಿಂದ ಹಿಡಿದು ಬಿಜೆಪಿಯ ಎಲ್ಲಾ ನಾಯಕರು ಹಾಗೂ ಅನೇಕ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳನ್ನು ಲೇವಡಿ ಮಾಡುತ್ತಿದ್ದರು. ಆದರೆ ಈಗ ಅವರೇ ಅನೇಕ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಗೆ ಭರವಸೆ ಕೊಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಹೆಮ್ಮೆ. ಬಿಜೆಪಿ ನಮ್ಮಿಂದ ಗ್ಯಾರಂಟಿ ಯೋಜನೆಯನ್ನು ನಕಲು ಮಾಡಿದೆ ಎಂದು ತಿರುಗೇಟು ನೀಡಿದರು.

Related