ನವದೆಹಲಿ, ಏ. 4: 2004ನೇ ಇಸವಿಯಲ್ಲಿ ಇತಿಹಾಸ ಪ್ರಸಿದ್ಧ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ದ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ಅಜೇಯ 241 ರನ್ ಗಳಿಸಿದ್ದರು. ಈ ಬಗ್ಗೆ ಮಾತನಾಡಿರುವ ವೆಸ್ಟ್‌ಇಂಡೀಸ್‌ನ ಮಾಜಿ ಬ್ಯಾಟಿಂಗ್ ದಿಗ್ಗಜ ಬ್ರಿಯಾನ್ ಲಾರಾ, ಇದು ಸಚಿನ್ ವೃತ್ತಿ ಜೀವನದ ಅತ್ಯಂತ ಶಿಸ್ತುಬದ್ಧ ಇನ್ನಿಂಗ್ಸ್ ಆಗಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿಡ್ನಿಯಲ್ಲಿ 16 ವರ್ಷಗಳ ಹಿಂದೆ ನಡೆದ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಸಚಿನ್ ದ್ವಿಶತಕ ಹಾಗೂ ವಿವಿಎಸ್ ಲಕ್ಷ್ಮಣ್ (178) ಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್ ನಷ್ಟಕ್ಕೆ 705 ರನ್‌ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿತ್ತು. 613 ನಿಮಿಷಗಳಷ್ಟು ಕಾಲ ಕ್ರೀಸಿನಲ್ಲಿದ್ದ ಸಚಿನ್ ತಮ್ಮ ಮ್ಯಾರಥಾನ್ ಇನ್ನಿಂಗ್ಸ್‌ನಲ್ಲಿ 436 ಎಸೆತಗಳಲ್ಲಿ 241 ರನ್ ಗಳಿಸಿ ಔಟಾಗದೆ ಉಳಿದರು. ಇದರಲ್ಲಿ 33 ಬೌಂಡರಿಗಳು ಸೇರಿದ್ದವು. ವೀರೇಂದ್ರ ಸೆಹ್ವಾಗ್ ಸಹ 72 ರನ್ ಗಳಿಸಿದ್ದರು.
ಬಳಿಕ ಉತ್ತರ ನೀಡಿದ ಆಸೀಸ್, ಜಸ್ಟಿನ್ ಲ್ಯಾಂಗರ್ (117) ಹಾಗೂ ಸೈಮನ್ ಕ್ಯಾಟಿಚ್ (125) ಶತಕದ ಹೊರತಾಗಿಯೂ 474 ರನ್‌ಗಳಿಗೆ ಆಲೌಟ್ ಆಗಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮಗದೊಮ್ಮೆ ಸಚಿನ್ ಅಜೇಯ ಅರ್ಧಶತಕದ (60*) ನೆರವಿನಿಂದ ಭಾರತ ಎರಡು ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು. ರಾಹುಲ್ ದ್ರಾವಿಡ್ ಸಹ 91 ರನ್ ಗಳಿಸಿ ಅಜೇಯರಾಗುಳಿದಿದ್ದರು. ದಿಟ್ಟ ಉತ್ತರ ನೀಡಿದ ಆಸೀಸ್ ಕೊನೆಯ ದಿನದಾಟದ ಅಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 357 ರನ್ ಪೇರಿಸಿದ ಪರಿಣಾಮ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಲಾಯಿತು.
2