ಕಲುಷಿತ ನೀರನ್ನು ಶುದ್ಧ ಮಾಡುವ ಯಂತ್ರದ ಪ್ರಾತ್ಯಕ್ಷಿಕೆ…

ಕಲುಷಿತ ನೀರನ್ನು ಶುದ್ಧ ಮಾಡುವ ಯಂತ್ರದ ಪ್ರಾತ್ಯಕ್ಷಿಕೆ…

ಬೊಮ್ಮನಹಳ್ಳಿ ,ಆಗಸ್ಟ್ 09 : ಚರಂಡಿ ನೀರನ್ನು ಕ್ಷಣಾರ್ಧದಲ್ಲೇ ಸಂಸ್ಕರಿಸಿ ಶುದ್ಧ ಕುಡಿಯುವ ನೀರು ನೀಡುವ ‘ಗಾಲ್ ಮೊಬೈಲ್’ ನೀರು ಸಂಸ್ಕರಣೆ ಯಂತ್ರದ ಪ್ರಾತ್ಯಕ್ಷಿಕೆಯನ್ನು ಶಾಸಕ ಎಂ. ಸತೀಶ್ ರೆಡ್ಡಿ ನೇತೃತ್ವದಲ್ಲಿ ಆರಂಭಿಸಲಾಯಿತು.

ಈ ವೇಳೆ ಮಾತನಾಡಿದ ಶಾಸಕ ಸತೀಶ್ ರೆಡ್ಡಿ ‘ಮೋದಿಯವರು ಇಸ್ರೇಲ್‌ಗೆ ಭೇಟಿ ನೀಡಿದ್ದಾಗ, ಗಾಲ್ ಮೊಬೈಲ್ ಉಪಯುಕ್ತತತೆ ಬಗ್ಗೆ ಮಾಹಿತಿ ಪಡೆದು ಈ ಯಂತ್ರಗಳನ್ನು ಭಾರತಕ್ಕೆ ತರಲು ಆಸಕ್ತಿ ತೋರಿದ್ದರು. ಇದೀಗ ಗುಜರಾತಿನಲ್ಲಿ ೧೫ ಯಂತ್ರಗಳು ಕೆಲಸ ನಿರ್ವಹಿಸುತ್ತಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಈ ಯಂತ್ರದ ಪ್ರಾತ್ಯಕ್ಷಿಕೆಯನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ನೆರೆ ಸಂಭವಿಸಿ ನೀರಿಗೆ ತೊಂದರೆಯಾದಾಗ ಯಂತ್ರ ಬಳಸಿ ಸ್ಥಳದಲ್ಲೇ ಶುದ್ಧ ನೀರು ಒದಗಿಸಬಹುದು. ಎಸ್‌ಟಿಪಿಗಳಿಗೆ ಕುಡಿಯುವ ನೀರಿನ ಅಭಾವವಿರುವ ಬಡಾವಣೆ, ಶಾಲೆ-ಕಾಲೇಜುಗಳಲ್ಲಿ ಮತ್ತು ಹಳ್ಳಿಗಳಿಗೂ ಈ ಯಂತ್ರವನ್ನು ಸುಲಭವಾಗಿ ಕೊಂಡೊಯ್ಯಬಹುದಾಗಿದೆ. ಸದರಿ ಯಂತ್ರಕ್ಕೆ ೧.೨೫ ಲಕ್ಷ ರೂಪಾಯಿ ಬೆಲೆ ಇದ್ದು, ಕಂಪನಿಯೇ ಇದರ ನಿರ್ವಹಣೆ ಮಾಡುತ್ತದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿ, ಈ ಯಂತ್ರವನ್ನು ‘ಮೇಕ್ ಇನ್ ಕರ್ನಾಟಕ’ ಯೋಜನೆಯಡಿ ಉತ್ಪಾದಿಸಲು ಕೋರಲಾಗುವುದು’ ಎಂದರು.

ಯಂತ್ರದ ಕಾರ್ಯನಿರ್ವಹಣೆ

ಕೊಳವೆಯ ಮೂಲಕ ಚರಂಡಿ ನೀರನ್ನು ಹೀರಿಕೊಳ್ಳುವ ಯಂತ್ರವು, ನಾಲ್ಕು ಹಂತದ ಸಂಸ್ಕರಣೆಯಲ್ಲಿ ಬಳಕೆಗೆ ಯೋಗ್ಯವಲ್ಲದ ಚರಂಡಿಯ ನೀರನ್ನು ಸ್ಥಳದಲ್ಲೇ ಶುದ್ಧ ಕುಡಿಯುವ ನೀರನ್ನಾಗಿ ಪರಿವರ್ತಿಸುತ್ತದೆ. ಕಿರಿದಾದ ಪ್ರದೇಶಗಳಿಗೂ ಕೊಂಡೊಯ್ಯಬಹುದಾದ ಚಿಕ್ಕ ವಾಹನದಲ್ಲಿ ಯಂತ್ರವನ್ನು ಅಳವಡಿಸಲಾಗಿದೆ.

ನಾಲ್ಕು ಶೋಧಕ ಕೊಳಾಯಿಗಳು ಮೊದಲಿಗೆ ತ್ಯಾಜ್ಯ ನೀರಿನ ಸಣ್ಣ ಕಣಗಳನ್ನು ಹೊರಹಾಕಿ, ನಂತರ ದೊಡ್ಡ ಕಣಗಳನ್ನು ಶೋಧಿಸುತ್ತದೆ. ಮೂರು ಮತ್ತು ನಾಲ್ಕನೇ ಶೋಧಕಗಳು ನೀರಿನ ದುರ್ಗಂಧವನ್ನು ತೆಗೆದು, ಅಂತಿಮವಾಗಿ  ಕುಡಿಯಲು ಯೋಗ್ಯವಾದ ನೀರನ್ನಾಗಿಸುತ್ತದೆ.

ಕೃತಕ ಬುದ್ಧಿಮತ್ತೆಯ ತಾಂತ್ರಿಕತೆಯನ್ನು ಬಳಸಿ ಈ ಯಂತ್ರವನ್ನು ತಯಾರಿಸಲಾಗಿದ್ದು, ದಿನಕ್ಕೆ ೧೫ ರಿಂದ ೨೦ ಸಾವಿರ ಲೀಟರ್ ನೀರನ್ನು ಸಂಸ್ಕರಿಸುತ್ತದೆ. ಇದೇ ಮಾದರಿಯ ದೊಡ್ಡ ಯಂತ್ರ ೮೦ ಸಾವಿರ ಲೀಟರ್ ನೀರನ್ನು ಸಂಸ್ಕರಿಸುತ್ತದೆ, ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿದೆ ಎಂದು ತಾಂತ್ರಿಕ ಸಲಹೆಗಾರ ಡಾ.ಮೂರ್ತಿ ಹೇಳುತ್ತಾರೆ.

ಈಗಾಗಲೇ ಮಿಲಿಟರಿ, ಎನ್‌ಡಿಆರ್‌ಎಫ್ ನಲ್ಲಿ ಬಳಸಲಾಗುತ್ತಿದ್ದು, ನಿರ್ವಹಣಾ ವೆಚ್ಚವೂ ಕಡಿಮೆ ಇದೆ. ಕೆಲವು ಫ್ಲೋರೇಡ್ ಯುಕ್ತ ನೀರು ಕುಡಿದು ಅನೇಕ ಖಾಯಿಲೆಗಳಿಗೆ ತುತ್ತಾಗುತ್ತಿರುವ ಕುರಿತು ವರದಿಗಳಿದ್ದು, ಅಂತಹ ಪ್ರದೇಶಗಳಿಗೆ ಈ ಯಂತ್ರ ಸಹಾಯಕವಾಗಲಿದೆ.

ಈ ಸಂದರ್ಭದಲ್ಲಿ ಬಿಬಿಎಂಪಿ ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ಕೃಷ್ಣಮೂರ್ತಿ, ಬಿಜೆಪಿ ಮುಖಂಡರುಗಳು, ಕಾರ್ಯಕರ್ತರುಗಳು ಭಾಗವಹಿಸಿದ್ದರು.

Related