ಹಾವೇರಿ: ಬಸನಗೌಡ ಪಾಟೀಲ್ ಯತ್ನಾಳ್ ಅವರು ಇಂಡಿ ಏತ ನೀರಾವರಿ ಯೋಜನೆ, ಬಿಜಾಪುರ ಸಮಗ್ರ ನೀರಾವರಿ ಯೋಜನೆಗೆ ಹೊರಾಟ ಮಾಡಿದ್ದರು. ಆಗ ಅಲ್ಲಿ ಭಾಗವಹಿಸಿ ಅಂತರ ಜಲ ಹೆಚ್ಚಿಸಲು ಕೆರೆ ತುಂಬಿಸುವ ಯೋಜನೆ ಮಾಡುವುದು ಸೂಕ್ತ ಎಂದು ತಿಳಿದು ಅಲ್ಲಿ ಕೆರೆ ತುಂಬಿಸುವ ಯೋಜನೆ ಮಾಡಿದೆ. ನಂತರ ಶಿಗ್ಗಾವಿ ಸವಣೂರು ಏತ ನೀರಾವರಿ ಕೆರೆ ತುಂಬಿಸುವ ಯೋಜನೆ ಮಾಡಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು (ಶುಕ್ರವಾರ ನ.08) ರಂದು ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ತಿಮ್ಮಾಪುರ, ಹಿರೇಬೆಂಡಿಗೇರಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಮಾಡಿದ ಅವರು, ಕರ್ನಾಟಕದಲ್ಲಿ ಕೆರೆ ತುಂಬಿಸುವ ಯೋಜನೆ ಮೊದಲು ಆರಂಭಿಸಿದವನೇ ನಾನು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಡಿಸಿಎಂ ಡಿ. ಕೆ ಶಿವಕುಮಾರ್ ಅವರು ಶಿಗ್ಗಾವಿಯಲ್ಲಿ ಬೊಮ್ಮಾಯಿಯವರು ಯಾವುದಾದರು ಒಂದು ಯೋಜನೆ ತಂದಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಅವರಿಗೆ ತಿಳಿಸಲು ಬಯಸುತ್ತೇನೆ. ಇಡಿ ರಾಜ್ಯದಲ್ಲಿ ಕೆರೆ ತುಂಬಿಸುವ ಯೋಜನೆ ಆರಂಭಿಸಿದ್ದು ನಾನೇ ಎಂದು ತಿರುಗೇಟು ನೀಡಿದರು.
ಕನಕಪುರದಲ್ಲಿ ಸುಮಾರು ವರ್ಷಗಳಿಂದ ಒಂದು ನೀರಾವರಿ ಯೋಜನೆ ಮಾಡಿರಲಿಲ್ಲ. ಅಲ್ಲಿನ ಜನರು ಬಂದು ನನಗೆ ಮನವಿ ಮಾಡಿದ್ದರು. ನಾನು ಹೋಗಿ ನೀರಾವರಿ ಯೋಜನೆ ಜಾರಿ ಮಾಡಿದೆ. ವರುಣಾ ಕ್ಷೇತ್ರದಲ್ಲಿ 103 ಕಿ.ಮಿ. ರಸ್ತೆ ಮಾಡಿದ್ದು ಬಸವರಾಜ ಬೊಮ್ಮಾಯಿ, ಈ ಸರ್ಕಾರಕ್ಕೆ ರಸ್ತೆ ಗುಂಡಿ ಮುಚ್ಚಲು ಟಾರ ಹಾಕಲು ಹಣ ಇಲ್ಲ, ಮಣ್ಣು ಹಾಕಿ ರಸ್ತೆ ಗುಂಡಿ ಮುಚ್ಚಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಮಾಸ್ ಲೀಡರ್, ಹೀಗಾಗಿ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ: ಡಿಸಿಎಂ
ವಸತಿ ಸಚಿವ ಜಮೀರ್ ಅಹಮದ್ ಅವರು ಬಸವರಾಜ ಬೊಮ್ಮಾಯಿಯವರು ಶಿಗ್ಗಾವಿಯಲ್ಲಿ ಒಂದೂ ಮನೆ ಕಟ್ಟಿಲ್ಲ ಎಂದು ಹೇಳಿದ್ದಾರೆ ನಾನು ಹನ್ನೆರಡು ಸಾವಿರಕ್ಕೂ ಹೆಚ್ಚು ಮನೆ ನಿರ್ಮಾಣ ಮಾಡಿದ್ದೇನೆ. ಜಮೀರ್ ಅಹಮದ್ ಅವರೇ ನೀವು ಶಿಗ್ಗಾವಿ ಕ್ಷೇತ್ರಕ್ಕೆ ಒಂದೂವರೆ ವರ್ಷದಲ್ಲಿ ಎಷ್ಟು ಮನೆ ಕಟ್ಟಿಸಿದ್ದೀರಿ, ನಿಮ್ಮ ಕ್ಷೇತ್ರದಲ್ಲಿ ಎಷ್ಟು ಮನೆ ಕಟ್ಟಿಸಿದ್ದೀರಿ ಎಂದು ಸವಾಲು ಹಾಕಿದರು.
ಇಡಿ ಸರ್ಕಾರ ಬೊಮ್ಮಾಯಿಯನ್ನು ಸೊಲಿಸಲು ಬಂದಿದ್ದಾರೆ ಈ ಚುನಾವಣೆ ಬೊಮ್ಮಾಯಿ ವರ್ಸಸ್ ಕರ್ನಾಟಕ ಸರ್ಕಾರ, ಎಲ್ಲರೂ ದುಡ್ಡಿನ ಚೀಲ ತುಂಬಿಕೊಂಡು ಬಂದಿದ್ದಾರೆ. ಅದನ್ನು ಹಂಚುತ್ತಿದ್ದಾರೆ. ನಾನೂ ಇದನ್ನು ಸವಾಲಾಗಿ ಸ್ವೀಕರಿಸಿದ್ದೇನೆ ಎಂದರು.