ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕೆಂಡಮಂಡಲವಾಗಿದ್ದಾರೆ.
ಬೆಂಗಳೂರು ನಗರದಲ್ಲಿ ಸುರಂಗ ರಸ್ತೆ ಮಾಡಲು ಹೊರಟಿರುವ ಡಿಕೆ ಶಿವಕುಮಾರ್ ಅವರು ಕೇವಲ ಇದರಿಂದ ಸೀಮಂತರಿಗೆ ಮಾತ್ರ ಲಾಭವಾಗುತ್ತದೆ, ಇದರಿಂದ ಯಾವುದೇ ರೀತಿ ಪ್ರಯೋಜನ ಇಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ್ದರು.
ಅದಕ್ಕೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ಕೂಡ ಟ್ರೀಟ್ ಮಾಡುವ ಮೂಲಕ ತೇಜಸ್ವಿ ಸೂರ್ಯ ಅವರಿಗೆ ತಿರುಗೇಟು ನೀಡಿತ್ತು. ಇದಲ್ಲದೆ ಮತ್ತೆ ಇದೀಗ ತೇಜಸ್ವಿ ಸೂರ್ಯ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೊತೆ ಬಹಿರಂಗ ಚರ್ಚೆಗೆ ನಾನು ಸಿದ್ಧವಿದ್ದೇನೆ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಟೀಕೆಗಿಂತ ಕಾರ್ಯ ಮುಖ್ಯ: ಡಿಕೆಶಿ
ಈ ಕುರಿತು ಟ್ವೀಟ್ ಮಾಡಿರುವ ಅವರು, ಸುರಂಗ ರಸ್ತೆಗೆ ಸಂಬಂಧಿಸಿದ ತಾಂತ್ರಿಕ ಸಲಹೆ ಮತ್ತು ಸಾರ್ವಜನಿಕ ಚರ್ಚೆಗೆ ನೀವು (ಕಾಂಗ್ರೆಸ್ ಸರ್ಕಾರ) ನಿಜಕ್ಕೂ ಮುಕ್ತರಾಗಿದ್ದರೆ, ಡಿಕೆ ಶಿವಕುಮಾರ್ ಜೊತೆ ಬಹಿರಂಗ ಚರ್ಚೆಗೆ ಪ್ರಸ್ತಾಪಿಸುತ್ತಿದ್ದೇನೆ. ಸಮಯ ಮತ್ತು ಸ್ಥಳವನ್ನು ನೀವೇ ನಿಗದಿ ಮಾಡಿ. ಒಳಿತು ಕೆಡುಕುಗಳನ್ನು ಆರೋಗ್ಯಕರ ರೀತಿಯಲ್ಲಿ ಚರ್ಚಿಸುವುದು ಖಂಡಿತವಾಗಿಯೂ ಪ್ರಯೋಜನಕಾರಿಯಾಗಿದೆ. ನಿಮ್ಮಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದೇನೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
