ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ: ಡಿ.ಕೆ.ಶಿ

ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ: ಡಿ.ಕೆ.ಶಿ

ಬೆಂಗಳೂರು: ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ಪ್ರಜಾಪ್ರಭುತ್ವ ಉಳಿಸಲು ಶ್ರಮಿಸಿದೆ. ಇದಕ್ಕೆ ಈಗ ಪಕ್ಷದ ಆಂತರಿಕ ಚುನಾವಣೆ ಸಾಕ್ಷಿ. ನಾವು ದೇಶ ಹಾಗೂ ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಿಕೊಂಡಿದ್ದೇವೆ.

24 ವರ್ಷಗಳ ನಂತರ ಪಕ್ಷದಲ್ಲಿ ಚುನಾವಣೆ ನಡೆದಿದೆ. ನಾನು ಈ ಸಂದರ್ಭದಲ್ಲಿ ಮೊದಲು ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ರಾಜ್ಯದ ಜನತೆ ಪರವಾಗಿ, ಕಾಂಗ್ರೆಸ್  ಕಾರ್ಯಕರ್ತರ ಪರವಾಗಿ ಕೃತಜ್ಞತೆ ಸಲ್ಲಿಸಬಯಸುತ್ತೇನೆ. ಬಹಳ ಕಷ್ಟಕಾಲದಲ್ಲಿ ಅವರು ಪಕ್ಷದ ಜವಾಬ್ದಾರಿ ವಹಿಸಿಕೊಂಡು, ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿ, 10 ವರ್ಷಗಳ ಆಳ್ವಿಕೆಗೆ ಕಾರಣರಾಗಿದ್ದರು. ಆ ಮೂಲಕ ದೇಶಕ್ಕೆ ಶಕ್ತಿ ತುಂಬಿ ಬದಲಾವಣೆ ತಂದರು.

ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹಿನ್ನಡೆ ಅನುಭವಿಸಿದಾಗ ರಾಹುಲ್ ಗಾಂಧಿ ಅವರು ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನ ತ್ಯಜಿಸಿದರು. ಆಗ ನಮ್ಮ ಕಾರ್ಯಕಾರಿ ಸಮಿತಿ ಸದಸ್ಯರು ಒತ್ತಾಯ ಮಾಡಿದಾಗ ಅವರಿಗೆ ಎಷ್ಟೇ ಸಮಸ್ಯೆ ಇದ್ದರೂ ಸೋನಿಯಾ ಗಾಂಧಿ ಅವರು ಮತ್ತೆ ಪಕ್ಷದ ಜವಾಬ್ದಾರಿ ವಹಿಸಿಕೊಂಡು, ಈಗ ಈ ಚುನಾವಣೆ ನಡೆಸಿದ್ದಾರೆ.

ಗಾಂಧಿ ಕುಟುಂಬವೇ ಪಕ್ಷದ ನೇತೃತ್ವ ವಹಿಸಬೇಕು ಎಂದು ನಾವು ಒತ್ತಾಯಿಸಿದರೂ ಅವರು ಗಾಂಧಿ ಕುಟುಂಬ ಹೊರತಾಗಿ ಬೇರೆಯವರು ನೇತೃತ್ವ ವಹಿಸಬೇಕು ಎಂದು ಸದಸ್ಯತ್ವ ಅಭಿಯಾನ ಹಾಗೂ ಚುನಾವಣೆ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ 78 ಲಕ್ಷ ಸದಸ್ಯರನ್ನು ಮಾಡಲಾಗಿದೆ. ಇನ್ನು ರಾಜ್ಯದಿಂದ 503 ಮಂದಿ ಪ್ರತಿನಿಧಿಗಳು, ಈ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ.

ಪಕ್ಷದ ಶಾಸಕರು ಬೇರೆ ಕಾರ್ಯಕರ್ತರಿಗೆ ಮತದಾನದ ಹಕ್ಕನ್ನು ನೀಡಿರುವ ದಾಖಲೆಗಳು ನಮ್ಮ ರಾಜ್ಯದಲ್ಲಿ ಇದೆ. ಸೋನಿಯಾ ಗಾಂಧಿ ಅವರು ಈ ಚುನಾವಣೆ ನಡೆಸಿದ್ದಾರೆ. ನಾನು ಹಾಗೂ ಸುರೇಶ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ, ನಿಮ್ಮ ಕುಟುಂಬದವರೇ ಅಧ್ಯಕ್ಷರಾಗಬೇಕು ಎಂದು ಕೇಳಿದಾಗ ಅವರು ನಗುತ್ತಾ, ನಾವು ಈಗಾಗಲೇ ನಿರ್ಧರಿಸಿಯಾಗಿದೆ. ನಿನ್ನೆಯಷ್ಟೇ ಶಶಿತರೂರ್ ಅವರು ಬಂದಿದ್ದರು, ಅವರು ಸ್ಪರ್ಧಿಸುತ್ತಿದ್ದಾರೆ. ನೀವು ನಿಲ್ಲುತ್ತೀರಾ ಎಂದು ತಮಾಷೆ ಮಾಡಿದರು. ನಾನು ಅದಕ್ಕೆ ಈಗಾಗಲೇ ಕೊಟ್ಟಿರುವ ಜವಾಬ್ದಾರಿ ಹೆಚ್ಚಾಗಿದೆ ಎಂದು ಹೇಳಿದೆ. ಹೀಗೆ ಪಾರದರ್ಶಕವಾಗಿ ಅವರು ಯಾರ ಪರವೂ ಪ್ರಚಾರ ಮಾಡದೇ ಚುನಾವಣೆ ನಡೆಸಿದ್ದಾರೆ.

ನಿಜಲಿಂಗಪ್ಪನವರ ನಂತರ ದೇಶದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗರು ಆಯ್ಕೆಯಾಗಿರುವುದು ನಮ್ಮ ಪಾಲಿಗೆ ಭಾಗ್ಯ. ದೇಶಾದ್ಯಂತ ಮಲ್ಲಿಕಾರ್ಜುನ ಖರ್ಗೆ ಅವರಿಗೆ 7897 ಮತಗಳು ಸಿಕ್ಕಿದ್ದು, ಶಶಿ ತರೂರ್ ಅವರಿಗೆ 1072 ಮತಗಳು ಸಿಕ್ಕಿವೆ. 472 ಮತಗಳು ಅಮಾನ್ಯವಾಗಿವೆ.

ರಾಜ್ಯದ ಪರವಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸುವುದರ ಜತೆಗೆ ಶಶಿತರೂರ್ ಅವರಿಗೂ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಕಾರಣ, ಅವರು ಸ್ಪರ್ಧೆ ಮಾಡಿ, ಆರೋಗ್ಯಕರ ಚುನಾವಣೆ, ಪ್ರಜಾಪ್ರಭುತ್ವ ಮೌಲ್ಯ ರಕ್ಷಣೆಯಾಗಿದೆ.

ಖರ್ಗೆ ಅವರು ಸುಮಾರು 50 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಶಾಸಕರಿಂದ ಹಿಡಿದು ಮಂತ್ರಿಯಾಗಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ, ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರಾಗಿ, ಲೋಕಸಭೆಗೆ ಆಯ್ಕೆಯಾಗಿ, ಸಚಿವರಾಗಿ, ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿ ಈಗ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಪಕ್ಷಕ್ಕೆ ನಿಷ್ಠರಾಗಿ ಶ್ರಮಿಸಿದರೆ ಯಾವ ಹಂತದವರೆಗೂ ಬೇಕಾದರೂ ಬೆಳೆಯಬಹುದು ಎಂಬುದಕ್ಕೆ ಖರ್ಗೆ ಅವರೇ ಸಾಕ್ಷಿ.

ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ನಿಯಮ ಇರುವ ಹಿನ್ನೆಲೆಯಲ್ಲಿ ಖರ್ಗೆ ಅವರು ಚುನಾವಣೆಗೆ ಸ್ಪರ್ಧಿಸುವ ಮುನ್ನ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದು ಈ ಪಕ್ಷದ ಆಂತರಿಕ ಪ್ರಜಾಪ್ರಭುತ್ವ. ದೇಶದಲ್ಲಿ ಬೇರೆ ಯಾವುದೇ ಪಕ್ಷದಲ್ಲಿ ಇಂತಹ ಚುನಾವಣೆ ನಡೆಯಲು ಸಾಧ್ಯವಿಲ್ಲ. ರಾಜಕೀಯ ವಿರೋಧಿಗಳು ಸಾಕಷ್ಟು ಟೀಕೆ ಮಾಡಿದ್ದಾರೆ. ಬಿಜೆಪಿಯವರು ಗಾಂಧಿ ಕುಟುಂಬ ಎಂದು ಮಾತನಾಡುತ್ತಾರೆ. ಆದರೆ ಬಿಜೆಪಿಯವರು ಒಂದೇ ರಾಜ್ಯಕ್ಕೆ ಎಲ್ಲ ಸ್ಥಾನಗಳನ್ನು ನೀಡಿದ್ದಾರೆ. ಅವರು ಅವರ ಪಕ್ಷದಲ್ಲಿ ಏನಾದರೂ ಮಾಡಿಕೊಳ್ಳಲಿ. ಅವರು ನಮ್ಮ ಬಗ್ಗೆ ಆರೋಗ್ಯಕರ ಟೀಕೆ ಮಾಡುವುದನ್ನು ಬಿಟ್ಟು ಹಳದಿ ಕಣ್ಣಲ್ಲಿ ನೋಡಿಕೊಂಡು ಬರುತ್ತಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇವಲ ಕರ್ನಾಟಕ ರಾಜ್ಯದ ನಾಯಕರು ಎಂದು ಬಿಂಬಿಸುವುದಿಲ್ಲ. ಅವರು ರಾಷ್ಟ್ರೀಯ ನಾಯಕರು. ಅವರು ಅಧ್ಯಕ್ಷರಾಗಿರುವುದರಿಂದ ನಮ್ಮ ರಾಜ್ಯಕ್ಕೆ ದೊಡ್ಡ ಶಕ್ತಿ ಬರುತ್ತದೆ. ಜತೆಗೆ ರಾಷ್ಟ್ರಕ್ಕೆ ದೊಡ್ಡ ಸಂದೇಶ ರವಾನೆಯಾಗಿದೆ.

135 ವರ್ಷಗಳ ಇತಿಹಾಸವುಳ್ಳ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷದ ಹಾದಿಯನ್ನು ಎಲ್ಲರೂ ಗಮನಿಸಿದ್ದಾರೆ. ರಾಹುಲ್ ಗಾಂಧಿ ಅವರು ಪಾದಯಾತ್ರೆ ಸಮಯದಲ್ಲೇ ಮತ ಚಲಾಯಿಸಿದ್ದಾರೆ. ದೇಶದ ಎಲ್ಲ ಪಕ್ಷದಲ್ಲಿ ಈ ವ್ಯವಸ್ಥೆ ಇರಬೇಕು. ನಮ್ಮ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಲ್ಲರ ಪರವಾಗಿ  ಮತ್ತೊಮ್ಮೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ದೇಶ ಹಾಗೂ ರಾಜ್ಯಕ್ಕೆ ಉತ್ತಮ ಶಕ್ತಿ ದೊರೆಯಲಿದೆ ಎಂದರು.

 

Related