ಹೆಚ್‌ ಡಿಕೆ ಮೊದಲು ಮೇಕೆದಾಟಿಗೆ ಅನುಮತಿ ಕೊಡಿಸಲಿ: ಡಿಸಿಎಂ

ಹೆಚ್‌ ಡಿಕೆ ಮೊದಲು ಮೇಕೆದಾಟಿಗೆ ಅನುಮತಿ ಕೊಡಿಸಲಿ: ಡಿಸಿಎಂ

ಬೆಂಗಳೂರು: ಮೇಕೆದಾಟು ಅಣೆಕಟ್ಟಿಗೆ ಅನುಮತಿಯನ್ನು ಒಂದೇ ದಿನದಲ್ಲಿ ಕೊಡಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರಲ್ಲ, ಮೊದಲು ಈ ಕೆಲಸವನ್ನು ಮಾಡಲಿ, ಆಮೇಲೆ ಮಾತಾಡಲಿ. ಅವರು ಅಧಿಕಾರದಲ್ಲಿ ಇದ್ದಾಗ ಎರಡನೇ ವಿಮಾನ ನಿಲ್ದಾಣ ಮಾಡಲು ಯಾವುದೇ ಹೆಜ್ಜೆಯಿಡಲಿಲ್ಲ. ನಾವು ಈಗ ಹೆಜ್ಜೆ ಇಟ್ಟಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಮಾನ ನಿಲ್ದಾಣವು ಬಿಡದಿ, ನೆಲಮಂಗಲ, ತುಮಕೂರು, ಸೋಲೂರು ಹೀಗೆ ಯಾವ ಸ್ಥಳದಲ್ಲಿ ಬರಬೇಕು ಎಂಬುದನ್ನು ತೀರ್ಮಾನ ಮಾಡುವುದು ನಮ್ಮ ವ್ಯಾಪ್ತಿಯಲ್ಲಿಲ್ಲ. ಇದು ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರು ತೀರ್ಮಾನ ಮಾಡುತ್ತಾರೆ. ಎರಡನೇ ವಿಮಾನ ನಿಲ್ದಾಣವನ್ನು ಇಂತಿಷ್ಟು ವರ್ಷಗಳ ಕಾಲ ನಿರ್ಮಾಣ ಮಾಡಬಾರದು ಎನ್ನುವ ಒಪ್ಪಂದವಿದೆ. ಇದನ್ನು ಆ ಎರಡು ಸಂಸ್ಥೆಗಳು ತೀರ್ಮಾನ ಮಾಡುತ್ತವೆ” ಎಂದರು.

ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್ ಅವರ ನೇತೃತ್ವದಲ್ಲಿ ಸ್ಳಳ ಪರಿಶೀಲನೆ ನಡೆಯುತ್ತಿದೆ. ಅವರು ಮುಖ್ಯಮಂತ್ರಿಗಳು ಹಾಗೂ ನನ್ನ ಬಳಿ ಮಾತನಾಡಿ ಆನಂತರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಪ್ರಾಧಿಕಾರದ ಅನುಮತಿ ಪಡೆದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದು ಹೇಳಿದರು. ಇದನ್ನೂ ಓದಿ: ಬಾನಂಗಳವನ್ನು ಕಂಗೊಳಿಸಲು ಬರುತ್ತಿದೆ ಏರೋಬ್ಯಾಟಿಕ್ ತಂಡ

ನಮ್ಮ ಊರಿನಲ್ಲಿ ವಿಮಾನ ನಿಲ್ದಾಣ ಬರಬೇಕು ಎನ್ನುವ ಆಸೆ ನನಗಿದೆ. ಆದರೆ ಆ ರೀತಿ ಮಾಡಲು ಆಗುವುದಿಲ್ಲ. ವಿಮಾನ ನಿಲ್ದಾನ ನಿರ್ಮಾಣ ಆಗಬೇಕು ಎಂದರೆ ಸಾಕಷ್ಟು ರೀತಿ, ರಿವಾಜುಗಳಿವೆ. ಗುಡ್ಡಗಳು ಇರಬಾರದು, ಫ್ಲೈಯಿಂಗ್ ಜೋನ್ ಇರಬೇಕು ಹೀಗೆ ಸಾಕಷ್ಟು ನಿಯಮಗಳಿವೆ. ಅಲ್ಲದೇ ಒಟ್ಟು 4,400 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.

ಕೆಂಪೇಗೌಡ ವಿಮಾನ ನಿಲ್ದಾಣ ಮಾಡುವಾಗ ನಾನೇ ನಗರಾಭಿವೃದ್ದಿ ಸಚಿವನಾಗಿದ್ದೆ. ವಿಮಾನ ನಿಲ್ದಾಣ ಮಾಡಬೇಕು ಎಂದರೆ ಒಂದಷ್ಟು ತಾಂತ್ರಿಕ ವಿಚಾರಗಳು ಇರುತ್ತವೆ. ಅದರ ಆಧಾರದ ಮೇಲೆ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

ಕುಮಾರಸ್ವಾಮಿ ಅವರ ಜಮೀನಿನ ಪಕ್ಕದವರು ಒತ್ತಾಯ ತರುತ್ತಾರೆ. ನಾನೂ ನನ್ನ ಜಮೀನು ಪಕ್ಕದಲ್ಲಿ ಇದ್ದವರಿಂದ ಮಾಡಿಕೊಳ್ಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.

 

Related