ಹೈಟೆಕ್ ಶಾಸಕರ ಕ್ಷೇತ್ರದಲ್ಲಿ ಫುಡ್ ಕಿಟ್ ರಂಪಾಟ

ಹೈಟೆಕ್ ಶಾಸಕರ ಕ್ಷೇತ್ರದಲ್ಲಿ ಫುಡ್ ಕಿಟ್ ರಂಪಾಟ

ಕೊರಟಗೆರೆ : ರಾಜ್ಯದೆಲ್ಲೆಡೆ ಹಸಿದವರ ಹೊಟ್ಟೆಗೆ ಉಳ್ಳವರು, ಜನಪ್ರತಿನಿಧಿಗಳು ಸಮಾಜ ಸೇವಕರು ಅನ್ನ ನೀಡುವ ಕಾಯಕದಲ್ಲಿ ತೊಡಗಿದ್ದಾರೆ.

ಇವೆಲ್ಲದಕ್ಕಿಂತ ವಿಭಿನ್ನವಾಗಿದೆ ಕೊರಟಗೆರೆ ವಿಧಾನ ಸಭಾ ಕ್ಷೇತ್ರ. ಯಾಕೆಂದರೆ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ ಮಾಡ ಬೇಕೆಂಬುದು ಕೆಪಿಸಿಸಿ ಅಜೆಂಡಾ. ಆದರೇ ಕೊರಟಗೆರೆ ಕ್ಷೇತ್ರದ ಶಾಸಕರ ಹೆಸರಲ್ಲಿ ಅದೂ ಅವರ ಭಾವ ಚಿತ್ರವುಳ್ಳ ಆಹಾರ ಧನ್ಯ ಕಿಟ್ ವಿತರಣೆ ಮಾಡಲಾಗುತ್ತಿದೆ. ಆದರೇ ಲಾಟರಿ ಹೊಡೆದಂತೆ ಸಿಕ್ಕವರಿಗೆ ಸೀರುಂಡೆ ಎನ್ನುವಂತಾಗಿದೆ ಪರಮೇಶ್ವರ ಅವರ ಫುಡ್ ಕಿಟ್.

ಫುಡ್ ಕಿಟ್ ವಿತರಣೆಯಲ್ಲೂ ಪರಮೇಶ್ವರ ಮತ್ತವರ ಕಾರ್ಯಕರ್ತರು ಕೀಳು ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರ ಕಾರ್ಯಕರ್ತರೇ ಖುದ್ದು ತಮ್ಮ ಅಸಮದಾನವನ್ನು ಪ್ರಾಜಾವಾಹಿನಿ ಪತ್ರಿಕೆಯೊಂದಿಗೆ ಹಂಚಿಕೊಂಡಿರುವುದು ಬೇಸರದ ಸಂಗತಿ.

ಪ್ರತಿ ಬಡವರಿಗೆ ತಲುಪಬೇಕಾದ ಫುಡ್ ಕಿಟ್‌ಗಳು ನ್ಯಾಯಯುತವಾಗಿ ತಲುಪುತ್ತಿಲ್ಲ. ಕಾರ್ಯಕರ್ತರೇ ಜಟಾಟಿಗೆ ಬಿದ್ದು ಕೈ ಕೈ ಮಿಲಾಯಿಸುವ ಹಂತಕ್ಕೆ ಪರಮೇಶ್ವರ ಅವರ ಫುಡ್ ಕಿಟ್ ಹಂಚಿಕೆ ಕಾರ್ಯಕ್ರಮ ತಲುಪಿರುವುದು ಮತ್ತೊಂದು ನೋವಿನ ಸಂಗತಿ.
ಶಾಸಕರಾದವರಿಗೆ ಕನಿಷ್ಟ ಪ್ರಜ್ಞೆ ಇಲ್ಲವೆಂದರೆ ಹೇಗೆ ಎಂದು ಕ್ಷೇತ್ರದ ಜನತೆ ಮಾತಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎಷ್ಟೋ ಕಡೆ ಕಿಟ್‌ಗಳೇ ವಿತರಣೆ ಆಗಿಲ್ಲ ಎನ್ನುವುದು ಕಾರ್ಯಕರ್ತರ ಅಸಮದಾನಕ್ಕೆ ಕಾರಣವಾಗಿದೆ. ಅದರಲ್ಲೂ ಕೆಲವರು ಕಿಟ್ ಗಳನ್ನು ಕದ್ದಿದ್ದಾರೆಂಬ ದೂರುಗಳು ಕೇಳಿ ಬಂದಿವೆ.

ಕೊರಟಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ಅಕ್ಕಿ ರಾಂಪುರ ಕೋಳಾಲ, ಕೋರಾ ಹೋಬಳಿ, ಪುರವರ, ಸಿಎನ್ ದುರ್ಗ ಹೋಬಳಿಯ ಬಹುತೇಕ ಹಳ್ಳಿಗಳಲ್ಲಿ ಕಾರ್ಯಕರ್ತರ ನಡುವೆ ಫುಡ್ ಕಿಟ್ ಹಂಚಿಕೆಯಲ್ಲಿ ತಮಗೆ ಬೇಕಾದವರಿಗೆ ಕಿಟ್ಟ ಸಿಕ್ಕಿಲ್ಲವೆಂದು ತಾರತಮ್ಯದ ಜಗಳ ಬಹಿರಂಗವಾಗಿಯೇ ನಡೆದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಶಾಸಕರೇ ಕಾರ್ಯ ಕರ್ತರ ನಡುವೆ ಜಗಳ ತಂದಿಟ್ಟು ತಮಾಷೆ ನೋಡುತ್ತಿದ್ದಾರಾ ಎನ್ನುವ ಅನುಮಾನಗಳು ಸಾಮಾನ್ಯ ಜನತೆಯನ್ನು ಕಾಡುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಕಸಬಾ ಹೋಬಳಿ ಗುಂಡಿನಪಾಳ್ಯದಲ್ಲಿ ನಡೆದ ಘಟನೆ. ಮಹಿಳಾ ಕಂಗ್ರೆಸ್ ಅಧ್ಯಕ್ಷೆ ಜಯಮ್ಮ ಮತ್ತು ಮಾಜಿ ಗ್ರಾಪಂ ಸದಸ್ಯ ಹಾಗೂಹಾಲಿ ತಾಪಂ ಸದಸ್ಯೆ ನರಸಮ್ಮ ಅವರ ಪತಿ ನರಸಿಂಹ ಮೂರ್ತಿ ನಡುವೆ ಫುಡ್ ಕಿಟ್ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಮಾಜಿ ಯೂತ್ ಕಾಂಗ್ರೆಸ್ ಅಧ್ಯಕ್ಷ ನಟೇಶ್ ಮತ್ತು ಸ್ಥಳೀಯ ನಿವಾಸಿ ಮಂಜು ಇತರರು ಗಲಾಟೆ ಬಿಡಿಸಿದ ಘಟನೆ ನಡೆದಿದೆ.

ಫುಡ್ ಕಿಟ್ ವಿತರಣೆಯಲ್ಲೂ ಸ್ಥಳೀಯವಾಗಿ ತಮಗೆ ಬೇಕಾದವರಿಗೆ ಹಂಚಿಕೆ ಮಾಡಿ ನ್ಯಾಯಸಮ್ಮತವಾಗಿ ಸಿಗಬೇಕಾದವರಿಗೆ ತಲುಪುತ್ತಿಲ್ಲ ಎನ್ನುವ ಆರೋಪಗಳನ್ನು ಸ್ವತಹ ಕಾಂಗ್ರೆಸ್ ಮುಖಂಡರೇ ದೂರುತ್ತಿರುವುದಲ್ಲದೆ ಶಾಸಕರ ನಡೆಯನ್ನು ಪ್ರಶ್ನಿಸುವಂತಾಗಿದೆ.

Related