ಮೊಟ್ಟೆ ಡೀಲ್ ಜೊಲ್ಲೆ-ಪರಣ್ಣರ ರಾಜೀನಾಮೆಗೆ ಒತ್ತಾಯ

ಮೊಟ್ಟೆ ಡೀಲ್ ಜೊಲ್ಲೆ-ಪರಣ್ಣರ ರಾಜೀನಾಮೆಗೆ ಒತ್ತಾಯ

ಕೊಪ್ಪಳ : ಜಿಲ್ಲೆಯ ಶಾಸಕ ಮತ್ತು ರಾಜ್ಯದ ಮಹಿಳಾ ಮಕ್ಕಳ ಮಾಜಿ ಸಚಿವೆ ಹಾಗೂ ಹಾಲಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಮೊಟ್ಟೆ ಹಗರಣದಲ್ಲಿ ಭಾಗವಹಿಸಿದ್ದು ಅವರ ರಾಜೀನಾಮೆಗೆ ಒತ್ತಾಯಿಸಿ ಜಿಲ್ಲಾ ಯುವ ಕಾಂಗ್ರೆಸ್ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟಿಸಿದರು.

ಮೊಟ್ಟೆ ಹಿಡಿದುಕೊಂಡು ಘೋಷಣೆ ಕೂಗುತ್ತಾ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಮಕ್ಕಳ ಮೊಟ್ಟೆ ಕದಿಯುವ ಕಳ್ಳ ಮಾಜಿ ಸಚಿವೆ ಹಾಗೂ ಶಾಸಕರನ್ನು ಪಕ್ಷದಿಂದಲೇ ವಜಾ ಮಾಡಬೇಕು ಎಂದು ಒತ್ತಾಯಿಸಿ, ಮೊಟ್ಟೆಯ ಮೇಲೆ ಪರಣ್ಣ ಮೊಟ್ಟೆ, ಜೊಲ್ಲೆ ಮೊಟ್ಟೆ, ಡೀಲ್ ಬಿಜೆಪಿ ಸರಕಾರ, ಬಿಜೆಪಿ ಮೊಟ್ಟೆ, ಪರ್ಸಂಟೇಜ್ ಪರಣ್ಣ ಮುಂತಾದ ಘೋಷಣೆಗಳನ್ನು ಬರೆದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಗವಿಸಿದ್ದನಗೌಡ ಪಾಟೀಲ ಅವರು ಮಾತನಾಡಿ, ಪರ್ಸಂಟೇಜ್ ಪರಣ್ಣರ ಅಕ್ರಮ ಹೊಸದಲ್ಲ. ಈ ಹಿಂದೆ ಅವರು ಇಂತದ್ದೇ ಕೆಲಸ ಮಾಡಿದ್ದಾರೆ. ಈಗ ಚಾನಲ್ ಮಾಡಿದ ಕೆಲಸದಲ್ಲಿ ಅವರು ಬಹಿರಂಗವಾಗಿ ಸಿಕ್ಕಿಬಿದ್ದಿದ್ದಾರೆ. ಈರ್ವರನ್ನು ವಜಾ ಮಾಡುವವರೆಗೆ ಬಿಡುವುದಿಲ್ಲ ಎಂದು ಹೇಳಿದರು.

ಳಿಕ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಷ್ಮಾ ಖಾಜಾವಲಿ ಮಾತನಾಡಿ, ನೈತಿಕತೆ ಇಲ್ಲದ ಬಿಜೆಪಿ ಶಾಸಕ ಜಿಲ್ಲೆಯಲ್ಲಿ ಇದ್ದಾರೆ ಎಂಬ ಮಾತು ಬೇಸರ ತರಿಸುತ್ತದೆ. ಜಿಲ್ಲೆಯ ಮರ್ಯಾದೆಯನ್ನು ಅವರು ತೆಗೆದಿದ್ದಾರೆ ಜನರೇ ಇವರ ಕೆಲಸ ನೋಡಿ ಎಚ್ಚೆತ್ತುಕೊಳ್ಳಬೇಕು ಎಂದರು.
ನಂತರ ಕಾಂಗ್ರೆಸ್ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಗುರುಬಸವರಾಜ ಹಳ್ಳಿಕೇರಿ ಮಾತನಾಡಿ, ಸಮಾಜದಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸ ಬಿಟ್ಟು ಬಿಜೆಪಿ ಬೇರೆ ಏನನ್ನೂ ಮಾಡುತ್ತಿಲ್ಲ. ಇಂತಹ ದುರಂತ ಜನರನ್ನು ಹೇಗೆ ಸಹಿಸಿಕೊಂಡಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಜನರು ಬದಲಾಗಬೇಕು ಎಂದರು.

ಈ ವೇಳೆ ಭಾಗ್ಯನಗರ ಪ.ಪಂ ಮಾಜಿ ಸದಸ್ಯ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಗೋಲ ಮಾಲ್ ಬಿಜೆಪಿಗೆ ಅದ್ಯಾವಗ ಬುದ್ದಿ ಬರುತ್ತದೆ ತಿಳಿಯದಾಗಿದೆ. ಸಮಾಜ ಸೇವೆ ಅನ್ನುವುದು ಕಾರ್ಪೋರೇಟ್ ಬಿಜೆಪಿಗೆ ತಿಳಿಯುವುದಿಲ್ಲ. ಕಾರ್ಪೋರೇಟ್ ಅಂದರೆ ಅದು ಹಣ ಹಾಕಿ ತೆಗೆಯುವ ಮತ್ತು ಲಾಭವನ್ನು ಮಾತ್ರ ಪರಿಗಣಿಸುವ ಸಂಸ್ಥೆ ಇದ್ದ ಹಾಗೆ. ಜನರು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅವರನ್ನು ದೇಶದಿಂದ ತೊಲಗಿಸಬೇಕು. ಆಡಳಿತದಲ್ಲಿ ಬಿಜೆಪಿ ಇರವುದಕ್ಕೆ ಯಾವುದೇ ಅರ್ಹತೆ ಇಲ್ಲ ಎಂಬುದು ಸಾಬೀತಾಗಿದೆ ಎಂದರು.

ಮೊಟ್ಟೆ ಹಗರಣದ ಮೂಲಕ ಅವರು ಮತ್ತೆ ಟೆಂಡರ್ ಮಾಡಿ ಸಣ್ಣ ಪುಟ್ಟ ಜನರಿಗೆ ಸಮಸ್ಯೆ ಮಾಡುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತರಿಗೆ ಮೊಟ್ಟೆ ಖರೀದಿಸಲು ಅಡ್ವಾನ್ಸ್ ಹಣ ಕೊಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಪ್ರಸ್ತುತ ಖಜಾನೆ ಅಧಿಕಾರಿಗಳು ಲಂಚಬಾಕರಾಗಿದ್ದು, ಅವರಿಗೆ ಬುದ್ಧಿ ಕಲಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಯುವ ಘಟಕ ಅಧ್ಯಕ್ಷ ಪ್ರಕಾಶರಡ್ಡಿ ಬಸರಿಗಿಡದ, ಕಾಂಗ್ರೆಸ್ ಹ್ಯೂಮನ್ ರೈಟ್ಸ್ ಘಟಕ ಅಧ್ಯಕ್ಷ ಹರೀಶ್ ಕಂಪಸಾಗರ, ಮಹೇಶ ನಾಯಕ ಅಗಳಕೇರಿ, ಪರಶುರಾಮ ಕೆರೆಹಳ್ಳಿ, ನೂರಜಹಾನ್‌ಬೇಗಂ, ಪದ್ಮಾವತಿ ಸುರೇಶ ಕಂಬಳಿ ಇನ್ನಿತರರಿದ್ದರು.

Related