ರಾಮಸ್ವಾಮಿ ಪಾಳ್ಯ ಕೊಳಗೇರಿ ಪ್ರದೇಶದಲ್ಲಿ ಫೀವರ್ ಕ್ಲಿನಿಕ್ ಗೆ ಚಾಲನೆ

ರಾಮಸ್ವಾಮಿ ಪಾಳ್ಯ ಕೊಳಗೇರಿ ಪ್ರದೇಶದಲ್ಲಿ ಫೀವರ್ ಕ್ಲಿನಿಕ್ ಗೆ ಚಾಲನೆ

ಬೆಂಗಳೂರು: ವಸಂತನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶೀಘ್ರ ಉಚಿತ ಡಯಾಲಿಸಿಸ್ ಕೇಂದ್ರ ಪ್ರಾರಂಭಿಸಲು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿ ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ವಸಂತನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಡಯಾಲಿಸಿಸ್ ಕೇಂದ್ರಕ್ಕೆಂದು ಸ್ಥಾಪಿಸಿರುವ ಕಟ್ಟಅಡದಲ್ಲಿ ಇನ್ನೂ ಡಯಾಲಿಸಿಸ್ ಕೇಂದ್ರ ಸ್ಥಾಪನೆಯಾಗಿರುವುದಿಲ್ಲ. ಈ ಸಂಬಂಧ ಸರ್ಕಾರಿ ಉಚಿತ ಡಯಾಲಿಸಿಸ್ ಸೇವೆ ಯೋಜನೆಯಡಿ, ಸದರಿ ಸ್ಥಳದಲ್ಲಿ ಡಯಾಲಿಸಿಸ್ ಸೇವೆ ಪ್ರಾರಂಭಿಸಬೇಕು. ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭಿಸಿಸುವುದರಿಂದ ಇಲ್ಲಿನ ಸುತ್ತಮುತ್ತಲಿನ ಬಡವರ್ಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಅದಕ್ಕಾಗಿ ಅಗತ್ಯ ಉಪಕರಣಗಳ ವ್ಯವಸ್ಥೆ ಮಾಡಿಕೊಂಡು ತ್ವರಿತಗತಿಯಲ್ಲಿ ಕೇಂದ್ರವನ್ನು ಪ್ರಾರಂಭಿಸಬೇಕೆಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಬಡವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿದೆ: ವಿಜಯೇಂದ್ರ

ವಸಂತನಗರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ಕೇಂದ್ರದ ಕಾರ್ಯವೈಖರಿಯನ್ನು ಪರಿಶೀಲಿಸಿ, ಪ್ರತಿನಿತ್ಯ ಎಷ್ಟು ಮಂದಿ ಆಸ್ಪತ್ರೆಗೆ ಭೇಟಿ ನೀಡುತ್ತಾರೆ, ಎಷ್ಟು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬಿತ್ಯಾದಿ ಮಾಹಿತಿಯನ್ನು ಪಡೆದುಕೊಂಡರು.

ರಾಮಸ್ವಾಮಿ ಪಾಳ್ಯದ ಕೊಳಗೇರಿ ಪ್ರದೇಶದಲ್ಲಿ ಫೀವರ್ ಕ್ಲೀನಿಕ್ ಗೆ ಚಾಲನೆ:

ಪೂರ್ವ ವಲಯದ ರಾಮಸ್ವಾಮಿ ಪಾಳ್ಯದ ಕೊಳಗೇರಿ ಪ್ರದೇಶದಲ್ಲಿ ಸ್ಥಾಪಿಸಿರುವ ಫೀವರ್ ಕ್ಲೀನಿಕ್ ಗೆ ಚಾಲನೆ ನೀಡಲಾಯಿತು. ಡೆಂಘೀ ಪ್ರಕರಣಗಳನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುವ ಕೊಳಗೇರಿ ಪ್ರದೇಶಗಳಲ್ಲಿ ಫೀವರ್ ಕ್ಲೀನಿಕ್ ಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರಿಜ್ವಾನ್ ಹರ್ಷದ್, ಆರೋಗ್ಯ ಇಲಾಖೆಯ ಆಯುಕ್ತರಾದ ಡಿ. ರಂದೀಪ್, ರಾಷ್ಟರೀಯ ಆರೋಗ್ಯ ಮಿಷನ್ ನಿರ್ದೇಶಕರಾದ ಡಾ. ನವೀನ್ ಭಟ್, ಮುಖ್ಯ ಆರೋಗ್ಯಾಧಿಕಾರಿಗಳಾದ ಡಾ. ಸೈಯದ್ ಸಿರಾಜುದ್ದೀನ್ ಮದನಿ, ಡಾ. ನಿರ್ಮಲಾ ಬುಗ್ಗಿ, ಪಶ್ವಿಮ ವಲಯ ಆರೋಗ್ಯಾಧಿಕಾರಿಯಾದ ಡಾ. ಭಾಗ್ಯಲಕ್ಷ್ಮೀ, ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Related