ಸಂಕಲ್ಪ ಮಾಡಿದರೆ ಕುಡಿತ ಬಿಡುವುದು ಕಷ್ಟ ಸಾಧ್ಯವಲ್ಲ

ಸಂಕಲ್ಪ ಮಾಡಿದರೆ ಕುಡಿತ ಬಿಡುವುದು ಕಷ್ಟ ಸಾಧ್ಯವಲ್ಲ

ಚಾಮರಾಜನಗರ : ಆತ್ಮವಿಶ್ವಾಸವಿಟ್ಟು ಒಂದೇ ಮನಸ್ಸಿನಿಂದ ಸಂಕಲ್ಪ ಮಾಡಿದರೆ ಕುಡಿತ ಬಿಡುವುದು ಕಷ್ಟ ಸಾಧ್ಯವಲ್ಲ. ಎಲ್ಲಾ ಸಮಸ್ಯೆಗಳಿಗೆ ಮನುಷ್ಯನಲ್ಲಿಯೇ ಪರಿಹಾರವಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಶ್ರೀಶಿವಕುಮಾರಸ್ವಾಮಿ ಭವನದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 9 ದಿನಗಳ ಕಾಲ ನಡೆದ ಕುಡಿತ ಬಿಡಿಸುವ ಶಿಬಿರ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಆಶೀರ್ವಾದ ನೀಡಿ ಮಾತನಾಡಿದರು.
ಕುಡಿತ ಒಂದು ಸಾಮಾಜಿಕ ಪಿಡುಗಾಗಿದೆ. ದಿನ್ನು ಬಿಡಿಸಲು ಯಾವುದೇ ಔಷಧಿ ಇಲ್ಲ. ಕುಡಿತ ಸೇರಿದಂತೆ ಆನೇಕ ಕೆಟ್ಟ ಅಭ್ಯಾಸಗಳನ್ನು ರೂಡಿಸಿಕೊಳ್ಳುವುದು ಬಹಳ ಸುಲಭ. ನಂತರ ದಿನಗಳಲ್ಲಿ ಅದನ್ನು ತ್ಯಜಿಸುವುದು ಬಹಳ ಕಷ್ಟವಾಗುತ್ತದೆ. ಕುಡಿತದ ಚಟಕ್ಕೆ ಬಲಿಯಾದವರ ಮನೆಗಳಲ್ಲಿ ಪ್ರತಿನಿತ್ಯ ನಡೆಯುವ ಗಲಾಟೆಗಳು ಆ ಕುಟುಂಬದ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಸುತ್ತಮುತ್ತಲಿನ ಪರಿಸರದಲ್ಲಿಯು ಕೆಟ್ಟ ಅಭಿಪ್ರಾಯ ಮೂಡುತ್ತದೆ. ಈ ಚಟಕ್ಕೆ ಒಳಗಾದವರು ಮನಸ್ಸಿನಲ್ಲೇ ದೃಢವಾದ ಸಂಕಲ್ಪ ಮಾಡಿ ಮದ್ಯಪಾನ ಮಾಡುವುದನ್ನು ಬಿಡಬೇಕು. ಈ ಮೂಲಕ ಅವರ ಸಂಸಾರಗಳು ಉತ್ತಮವಾಗಿರುತ್ತದೆ ಎಂದು ಕಿವಿಮಾತು ಹೇಳಿದರು.
ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮಾತನಾಡಿ, ಕುಡಿತ ಎಂಬುವುದು ಈಗ ಕಮಾನ್ ಆಗಿದೆ. ಎಲ್ಲರೂ ಕುಡಿಯುವ ಚಟಕ್ಕೆ ಬಿದ್ದಿದ್ದಾರೆ. ಇದರಿಂದಾಗುವ ತೊಂದರೆ ಹಾಗೂ ಸಮಸ್ಯೆಗಳ ಬಗ್ಗೆ ಯಾರು ಚಿಂತೆ ಮಾಡುತ್ತಿಲ್ಲ. ಕುಡಿತವು ಮನುಷ್ಯತ್ವವನ್ನು ಕಳೆದು ಹಾಕುತ್ತದೆ. ಕುಡಿತಕ್ಕೆ ಒಳಗಾದವರ ಕುಟುಂಬಗಳು ಬೀದಿಗೆ ಬೀಳುತ್ತವೆ. ಅವರ ಮಕ್ಕಳಿಗೆ ಸರಿಯಾದ ಶಿಕ್ಷಣ ದೊರೆಯುತ್ತಿಲ್ಲ. ಕುಡಿತವನ್ನು ಬಿಟ್ಟು ನಾವೆಲ್ಲರೂ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಒಳ್ಳೆಯ ಮನುಷ್ಯರಾಗಿ ಬಾಳಬೇಕು ಎಂದು ಕಿವಿಮಾತು ಹೇಳಿದರು.
ಕುಡಿತದ ಚಟಕ್ಕೆ ಒಳಗಾದವರನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಜೆಎಸ್‌ಎಸ್ ವಿದ್ಯಾಪೀಠ ನಡೆಸುತ್ತಿರುವ ಶಿಬಿರ ಬಹಳ ಅರ್ಥಪೂರ್ಣವಾಗಿದೆ. ಇದೊಂದು ಮಾನವೀಯತೆಯ ಶ್ರೇಷ್ಠ ಕೆಲಸವಾಗಿದೆ, ಜೆಎಸ್‌ಎಸ್ ಸಂಸ್ಥೆಯು ವಿದ್ಯಾದಾನ, ದಾಸೋಹ, ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುವ ಮೂಲಕ ಸಮಾಜದ ಅಭಿವೃದ್ದಿಗೆ ತನ್ನನ್ನು ತೊಡಗಿಸಿಕೊಂಡಿದೆ. ಇಂಥ ಕಾರ್ಯಕ್ರಮಗಳು ಸಂಸ್ಥೆಯ ಗೌರವವನ್ನು ಹೆಚ್ಚಿಸುತ್ತಿದೆ ಎಂದು ಶ್ರೀನಿವಾಸ್ ಪ್ರಸಾದ್ ಬಣ್ಣಿಸಿದರು.
ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಮಾತನಾಡಿ, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯು ಇದುವರೆಗೂ 10 ಶಿಬಿರಗಳನ್ನು ನಡೆಸಿ 606 ಮಂದಿಗೆ ಕುಡಿತ ಬಿಡಿಸಿರುವುದು ಪುಣ್ಯದ ಕೆಲಸವಾಗಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಮಾಡಲಾಗದ ಕೆಲಸವನ್ನು ಜೆಎಸ್‌ಎಸ್ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಹರವೆ ವಿರಕ್ತಮಠದ ಸರ್ಪಭೂಷಣ ಸ್ವಾಮೀಜಿ, ಚುಂಚನಹಳ್ಳಿ ಮಠದ ಬಸವರಾಜೇಂದ್ರ ಸ್ವಾಮೀಜಿ, ಶಾಸಕರಾದ ಎನ್.ಮಹೇಶ್, ಸಿ.ಪುಟ್ಟರಂಗಶೆಟ್ಟಿ, ಎಡಿಸಿ ಕಾತ್ಯಾಯಿನಿ ದೇವಿ, ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಶಿಬಿರದ ಸಂಚಾಲಕ ಸೋಮಶೇಖರ್ ಇನ್ನಿತರರಿದ್ದರು.

Related