ಮುಖಂಡನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ..!!

  • In Crime
  • June 15, 2022
  • 394 Views
ಮುಖಂಡನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ..!!

ತುಮಕೂರು, ಜೂ 15 : ಹಾಡಹಗಲೇ ನಡುರಸ್ತೆಯಲ್ಲಿ ಡಿಎಸ್ಎಸ್ ಮುಖಂಡನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಘಟನೆ ಜಿಲ್ಲೆಯ ಗುಬ್ಬಿ ಪಟ್ಟಣದ ಬಿಎಸ್ ರಸ್ತೆಯಲ್ಲಿ ನಡೆದಿದ್ದು, ಡಿಎಸ್ಎಸ್ ಸಂಘದ ತಾಲೂಕು ಸಂಚಾಲಕನಾಗಿದ್ದ ನರಸಿಂಹ ಮೂರ್ತಿ ಅಲಿಯಾಸ್ ಕುರಿ ಮೂರ್ತಿ(45) ಕೊಲೆಯಾಗಿದ್ದಾರೆ.
ಬುಧವಾರ ಮಧ್ಯಾಹ್ನದ ವೇಳೆ ಟೀ ಅಂಗಡಿಯ ಮುಂದೆ ಕುಳಿತಿದ್ದ ಕುರಿ ಮೂರ್ತಿ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದರು. ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನರಸಿಂಹ ಮೂರ್ತಿ ಮೃತದೇಹವನ್ನು ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಕಳುಹಿಸಲಾಗಿದ್ದು, ನೂರಾರು ಸಂಖ್ಯೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ನೆರೆದಿದ್ದಾರೆ. ಕುರಿ ಮೂರ್ತಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಟಿಎಸ್ ಪ್ರೇಮಾ ಭೇಟಿ ನೀಡಿ, ಮೃತರ ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ.

ನಿನ್ನೆ ಎಲ್ಲವೂ ಚೆನ್ನಾಗಿಯೇ ಇತ್ತು. ಅವರಿಗೆ ಯಾರೂ ಶತ್ರುಗಳು ಇರಲಿಲ್ಲ. ಆದರೆ ಇತ್ತೀಚೆಗೆ ರಾಜಕೀಯದಲ್ಲಿ ಮುಂದುವರಿದಿದ್ದರಿಂದ ಹೀಗಾಗಿದೆ. ಈ ಕೊಲೆಗೆ ಸರ್ಕಾರದ ವೈಫಲ್ಯವೇ ಕಾರಣ, ಸರ್ಕಾರ ನಮಗೆ ನ್ಯಾಯ ಒದಗಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

Related