ರೇಷ್ಮೆ ಮಾರುಕಟ್ಟೆಯಲ್ಲಿ ಭ್ರಷ್ಟಾಚಾರ ಸಹಿಸಲ್ಲ – ಸಚಿವ ಡಾ. ನಾರಾಯಣಗೌಡ

ರೇಷ್ಮೆ ಮಾರುಕಟ್ಟೆಯಲ್ಲಿ ಭ್ರಷ್ಟಾಚಾರ ಸಹಿಸಲ್ಲ – ಸಚಿವ ಡಾ. ನಾರಾಯಣಗೌಡ

ಬೆಂಗಳೂರು : ವಿಕಾಸ ಸೌಧದಲ್ಲಿ ರೇಷ್ಮೆ ಸಚಿವ ಡಾ. ನಾರಾಯಣಗೌಡ ಮಂಗಳವಾರ ರೇಷ್ಮೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳಿಗೆ ಕಟ್ಟೆಚ್ಚರ ನೀಡಿದರು.

ರೇಷ್ಮೆ ಮಾರುಕಟ್ಟೆಯಲ್ಲಿ ಲೂಟಿ ಮಾಡುವ ದಂಧೆಗೆ ಕಡಿವಾಣ ಹಾಕಿಲ್ಲವೇ, ಈ ಹಿಂದೆ ರೇಷ್ಮೆ ಸಚಿವನಾಗಿದ್ದಾಗಲೇ ಇ- ಪೇಮೆಂಟ್‌ಗೆ ಸಿದ್ದತೆ ಮಾಡಲಾಗಿತ್ತು. ಇದುವರೆಗೂ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ ಯಾಕೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇ-ಪೇಮೆಂಟ್ ತಕ್ಷಣ ಆರಂಭವಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಕೆಲಸ ಮಾಡುವ ಮನಸ್ಸಿಲ್ಲದಿದ್ದರೆ ಸ್ವಯಂ ನಿವೃತ್ತಿ ಪಡೆಯಿರಿ. ಕೆಲಸ ಮಾಡಲು ಅಸಕ್ತಿ ಇರುವ ಸಾಕಷ್ಟು ಜನರಿದ್ದಾರೆ. ಹಣ ಮಾಡಲು ಸಚಿವನಾಗಿ ಬಂದಿಲ್ಲ. ವರ್ಷದ ಹಿಂದೆ ಹೇಳಿದ್ದ ಕೆಲಸ ಇನ್ನೂ ಜಾರಿಗೆ ತಂದಿಲ್ಲ ಎಂದು ಕಿಡಿ ಕಾರಿದರು.

ಇ-ಟೆಂಡರ್, ಇ- ಪೇಮೆಂಟ್ 100% ಆಗಬೇಕು. ಕೆಲವು ಮಾರುಕಟ್ಟೆಯಲ್ಲಿ ಇ- ಪೇಮೆಂಟ್ ಇದ್ದರೂ, ಪರ್ಯಾಯವಾಗಿ ನಗದು ವ್ಯವಹಾರ ಕೂಡ ಇದೆ. ಒಂದು ರೂಪಾಯಿ ವ್ಯವಹಾರ ಕೂಡ ನಗದು ರೂಪದಲ್ಲಿ ಆಗಬಾರದು ಎಂದು ಸಚಿವ ನಾರಾಯಣಗೌಡ ಸ್ಪಷ್ಟ ಸೂಚನೆ ನೀಡಿದರು.

ಎಲ್ಲ ರೇಷ್ಮೆ ಮಾರುಕಟ್ಟೆಯಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ, ಇಲಾಖೆಯ ಎಲ್ಲ ಕಚೇರಿಗಳಲ್ಲಿ ಬಯೋಮೆಟ್ರಿಕ್ ಅಳವಡಿಕೆ ಆಗಬೇಕು. ಸಿಲ್ಕ್, ಮಿಲ್ಕ್ ರೈತರಿಗೆ ಜೀವನಾಧಾರವಾಗಿದೆ. ಹೆಣ್ಣುಮಕ್ಕಳು ಶ್ರಮವಹಿಸಿ ರೇಷ್ಮೆ ಬೆಳೆಯುತ್ತಿದ್ದಾರೆ. ಯಾವುದೇ ರೀತಿಯಲ್ಲಿ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು.

ಈ ವೇಳೆ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ವಿ ಅಮರಶೆಟ್ಟಿ, ರೇಷ್ಮೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ, ರೇಷ್ಮೆ ಇಲಾಖೆ ಆಯುಕ್ತ ಪೆದ್ದಪ್ಪಯ್ಯ, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Related