ಆಮ್ ಆದ್ಮಿಯಿಂದ ಕಾಂಗ್ರೆಸ್ ಧೂಳಿಪಟ: ಆರ್.ಅಶೋಕ್

ಆಮ್ ಆದ್ಮಿಯಿಂದ ಕಾಂಗ್ರೆಸ್ ಧೂಳಿಪಟ: ಆರ್.ಅಶೋಕ್

ಬೊಮ್ಮನಹಳ್ಳಿ :‘ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಸ್ಪರ್ಧೆಯಿಂದಾಗಿ ಕಾಂಗ್ರೆಸ್ ಧೂಳಿಪಟವಾಗಲಿದೆ’ಎಂದು ಕಂದಾಯ ಸಚಿವ ಆರ್.ಅಶೋಕ್ ಅಚ್ಚರಿಯ ಹೇಳಿಕೆ ನೀಡಿದರು. ಭಾನುವಾರ ಬೊಮ್ಮನಹಳ್ಳಿಯ ಹೊಸಪಾಳ್ಯ ಗ್ರಾಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ  ಹಮ್ಮಿಕೊಂಡಿದ್ದ ಲಲಿತಾ ಸಹಸ್ರನಾಮ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿದರು.

ಹಾಗಿದ್ದಲ್ಲಿ ಆಮ್ ಆದ್ಮಿ ಪಕ್ಷವನ್ನು ಬಿಜೆಪಿಯೇ ಬೆಳೆಸುತ್ತಿದೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸದೇ ನುಣುಚಿಕೊಂಡರು. ‘ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಕೇಂದ್ರದಲ್ಲಿರುವ ಹತ್ತಕ್ಕೂ ಹೆಚ್ಚು ಜನ ಕಾಂಗ್ರೆಸ್ ನಾಯಕರು ಆ ಪಕ್ಷವನ್ನು ತೊರೆದು, ಬಿಜೆಪಿ ಸೇರ್ಪಡೆ ಆಗಲಿದ್ದಾರೆ. ಗುಜರಾತ್ ಚುನಾವಣೆ ರಾಜ್ಯದ ಬಿಜೆಪಿ ಕಾರ್ಯಕರ್ತರಿಗೆ ಹೊಸ ಚೈತ್ಯನ್ಯ ನೀಡಿದೆ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ 130ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ’ ಎಂದರು.

ಶಾಸಕ ಎಂ.ಸತೀಶ್ ರೆಡ್ಡಿ ‘ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜನತೆ ಮೂರು ಬಾರಿ ನನ್ನನ್ನು ಶಾಸಕನನ್ನಾಗಿ ಆರಿಸಿದ್ದಾರೆ. ಮೂರೂ ಅವಧಿಯಲ್ಲಿ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳಿಂದಾಗಿ ಈ ಬಾರಿಯೂ ಜನ ನನ್ನ ಕೈ ಹಿಡಿಯುತ್ತಾರೆಂಬ ವಿಶ್ವಾಸವಿದೆ’ ಎಂದರು.

ಸಹಸ್ರನಾಮ ಪೂಜಾ ಕಾರ್ಯದಲ್ಲಿ ದೇವಿಗೆ ವಿಶೇಷ ಅಲಂಕಾರ, ಹೋಮ ಹವನ ನಡೆಯಿತು. ನಗಾರಿ, ಪೂಜಾ ಕುಣಿತ ದೇವತಾ ಕಾರ್ಯಕ್ಕೆ ಹಬ್ಬದ ಕಳೆ ನೀಡಿತು. ಐದು ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಭಾಗವಹಿಸಿದ್ದ ಎಲ್ಲರಿಗೂ ಬಾಗೀನ ನೀಡಲಾಯಿತು.

ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ಮುಖಂಡರಾದ ಶ್ರೀನಿವಾಸರೆಡ್ಡಿ, ಶ್ರೀನಿವಾಸಗೌಡ, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ರಾಮಚಂದ್ರ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸಯ್ಯದ್ ಸಲಾಂ, ನಾಗೇಂದ್ರ ಭಾಗವಹಿಸಿದ್ದರು.

 

Related