ಬೆಂಗಳೂರು: ಲೇಖಕಿ ಬಾನು ಮುಷ್ತಾಕ್ ಅವರಿಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡು ನಾಡಿನ ಘನತೆಯನ್ನು ಇಡಿ ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.
ಇನ್ನು ಬೂಕರ್ ಪ್ರಶಸ್ತಿಯನ್ನು ಪಡೆದಿರುವ ಲೇಖಕಿ ಬಾನು ಮುಷ್ತಾಕ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು.
ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಷ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ. ಇದನ್ನೂ ಓದಿ: ಭಾನು ಮುಷ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಭೂಕರ್ ಪ್ರಶಸ್ತಿ
ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತಾ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸುತ್ತಾ ಇರಲಿ ಎಂದು ಹಾರೈಸುತ್ತೇನೆ. ಬೂಕರ್ ಪ್ರಶಸ್ತಿಗೆ ಭಾಜನವಾಗಿರುವ ಅವರ ಕೃತಿ `ಹೃದಯ ದೀಪ’ವನ್ನು ಇಂಗ್ಲಿಷ್ಗೆ ಅನುವಾದಿಸಿರುವ ಪ್ರತಿಭಾವಂತ ಲೇಖಕಿ ದೀಪಾ ಭಸ್ತಿ ಅವರಿಗೂ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.