ಆನೇಕಲ್ ಭಾಗದಲ್ಲಿ ತುರ್ತು ಸಮಸ್ಯೆಗಳಿಗೆ 112 ಕರೆ ಮಾಡಿ

ಆನೇಕಲ್ ಭಾಗದಲ್ಲಿ ತುರ್ತು ಸಮಸ್ಯೆಗಳಿಗೆ 112 ಕರೆ ಮಾಡಿ

 ಆನೇಕಲ್: ತಾಲೂಕಿನಲ್ಲಿ ಅಪಘಾತ, ಗಲಾಟೆ ಸೇರಿದಂತೆ ಏನೇ ಸಮಸ್ಯೆಗಳಿದ್ದೂ ತುರ್ತು ದೂರವಾಣಿ ಸಂಖ್ಯೆ 112 ಗೆ ಕರೆ ಮಾಡಿದರೆ ಐದು ನಿಮಿಷದಲ್ಲಿ ಸ್ಥಳಕ್ಕೆ ಧಾವಿಸಲಾಗುವುದೆಂದು ಆನೇಕಲ್ ಪೊಲೀಸ್ ಠಾಣೆ ಎಎಸ್ಸೈ ನರಸಿಂಹ ರೆಡ್ಡಿ ತಿಳಿಸಿದ್ದಾರೆ.
ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಆನೇಕಲ್ ಬಸ್ ನಿಲ್ದಾಣದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿ ಆಯೋಜಿಸಿದ್ದ ಜನಜಾಗೃತಿ ಬೀದಿ ನಾಟಕದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತುರ್ತು ಸಮಸ್ಯೆಗಳ ದೂರವಾಣಿ 112 ಸಂಖ್ಯೆಗೆ ಸಂಯೋಜನೆಗೊಳಿಸಿದೆ. ಹೀಗಾಗಿ ಏನೇ ಸಮಸ್ಯೆಗಳಿದ್ದರೂ 112 ಕರೆ ಮಾಡಬಹುದು. ಒಂದು ವೇಳೆ ಈ ನಂಬರ್ ಸಿಗದಿದ್ದರೆ 08022486010ಗೆ ಕರೆ ಮಾಡಬಹುದೆಂದು ತಿಳಿಸಿದ್ದಾರೆ.
ಅಪಘಾತಗಳಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಮುಖ್ಯ ಕಾರಣ ಹೆಲ್ಮೆಟ್ ಧರಿಸದೆ ಇರುವುದೇ ಆಗಿದೆ. ಹೆಲ್ಮೆಟ್ ಇಲ್ಲದೆ 500 ರೂ. ದಂಡ ಕಟ್ಟುವ ಬದಲು 300 ರೂ. ಕೊಟ್ಟು ಹೆಲ್ಮೆಟ್ ಧರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಆನೇಕಲ್ ಪೊಲೀಸ್ ಠಾಣೆಯ ರಮೇಶ್, ಜ್ಞಾವ ವಿಕಾಸ ಕಾರ್ಯಕ್ರಮದ ಯೋಜನಾಧಿಕಾರಿ ಗಣೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಪದ್ಮಾ, ಬೀದಿ ನಾಟಕ ತಂಡದ ವೆಂಕಟಸ್ವಾಮಿ ಮತ್ತಿತರರಿದ್ದರು.

Related