2023-24ನೇ ಸಾಲಿನ ಬಜೆಟ್

2023-24ನೇ ಸಾಲಿನ ಬಜೆಟ್

ಸಿಎಂ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಆಯವ್ಯಯವನ್ನು ಸದನದ ಮುಂದೆ ಮಂಡಿಸಿದರು.

ಕೋವಿಡ್ ನಂತರದ ದಿನಗಳಲ್ಲಿ ಜಾಗತಿಕ ಚೇತರಿಕೆಗಿಂತ ತೀವ್ರಗತಿಯಲ್ಲಿ ಭಾರತ ಪುಟಿದೆದ್ದಿದೆ. ಇದೇ ಹಾದಿಯಲ್ಲಿ ಕರ್ನಾಟಕವೂ ದೃಢವಾಗಿ ಮುನ್ನಡೆಯುತ್ತಿದೆ.

ಜಾಗತಿಕವಾಗಿ ಹಲವಾರು ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಆರ್ಥಿಕ ಸ್ಥಿರತೆಗಾಗಿ ತೆಗೆದುಕೊಂಡ ಕ್ರಮಗಳ ಫಲವಾಗಿ ಭಾರತವು ಶೇ. 6.5 ರಷ್ಟು ಆರ್ಥಿಕ ಪ್ರಗತಿಯನ್ನು ಸಾಧಿಸಿರುವುದು ಗಮನಾರ್ಹವಾಗಿದೆ. ಇದೇ ಸಂದರ್ಭದಲ್ಲಿ G-20 ಶೃಂಗಸಭೆಯ ಅಧ್ಯಕ್ಷತೆ ಭಾರತಕ್ಕೆ ಒಲಿದಿರುವುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಜಾಗತಿಕ ಮನ್ನಣೆ ಸಿಕ್ಕಿರುವ ಪ್ರತೀಕವಾಗಿದೆ. ನಾನು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. G-20 ಶೃಂಗಸಭೆಗೆ ಪೂರ್ವಭಾವಿಯಾಗಿ ರಾಜ್ಯದಲ್ಲಿ 14 ಸಭೆಗಳು ನಡೆಯುತ್ತಿರುವುದು, ರಾಜ್ಯದ ಪ್ರಗತಿಪರ ಚಿಂತನೆ ಹಾಗೂ ಮುನ್ನಡೆಯನ್ನು ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸಲು ದೊರೆತ ಸುವರ್ಣಾವಕಾಶ ಎಂದು ನಾನು ಭಾವಿಸಿದ್ದೇನೆ.

ಈ ಆಯವ್ಯಯವು ಅಭಿವೃದ್ಧಿ ಮತ್ತು ಉತ್ತಮ ಭವಿಷ್ಯದ ಭರವಸೆಯಾಗಿದೆ. ಈ ಆರ್ಥಿಕ ವರ್ಷದಲ್ಲಿ ಕರ್ನಾಟಕದ ಉಜ್ವಲ ಭವಿಷ್ಯವನ್ನು ರೂಪಿಸುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವ ಸಾರ್ಥಕ ಭಾವದೊಂದಿಗೆ, ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ನಮ್ಮ ಕರ್ತವ್ಯಗಳು, ಗುರಿಗಳು ಹಾಗೂ ಫಲಿತಾಂಶಗಳ ದೂರದೃಷ್ಟಿಯೊಂದಿಗೆ ಈ ಆಯವ್ಯಯವನ್ನು ಮಂಡಿಸುತ್ತಿದ್ದೇನೆ.

ಹಣಕಾಸು ವರ್ಷದ ಮೊದಲ ಎರಡು ತಿಂಗಳಿನಲ್ಲಿಯೇ ಬಹಳಷ್ಟು ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಮೂಲಕ ಆಯವ್ಯಯದ ಸಕಾಲಿಕ ಹಾಗೂ ತ್ವರಿತ ಅನುಷ್ಠಾನಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಮಾನವ ಅಭಿವೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿಗೆ ಸಮಾನ ಆದ್ಯತೆ ನೀಡಿ, ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಲಾಗಿದೆ.

ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣದ ಮಂತ್ರದೊಂದಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ಇತರ ದುರ್ಬಲ ವರ್ಗದವರ ಸ್ವಾಭಿಮಾನದ, ಸ್ವಾವಲಂಬನೆಯ ಬದುಕಿಗೆ ಬೆಂಬಲ ನೀಡಿದ್ದೇವೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯನ್ನು ಕ್ರಮವಾಗಿ ಶೇ. 15 ರಿಂದ ಶೇ. 17ಕ್ಕೆ ಹಾಗೂ ಶೇ. 3 ರಿಂದ ಶೇ. 7 ಕ್ಕೆ ಹೆಚ್ಚಿಸುವ ಹಾಗೂ 24,000 ಪೌರ ಕಾರ್ಮಿಕರ ಸೇವೆ ಕಾಖಾಯಂಗ ಮಾಡುವ ಐತಿಹಾಸಿಕ ಕ್ರಮಗಳನ್ನು ಕೈಗೊಂಡಿದ್ದೇವೆ. ಜನರ ಅಭ್ಯುದಯ, ಅಗತ್ಯಗಳನ್ನೇ ಕೇಂದ್ರೀಕರಿಸಿದ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಡಿ.ಬಿ.ಟಿ. ಮೂಲಕ ಫಲಾನುಭವಿಗಳಿಗೆ ನೇರವಾಗಿ ಸವಲತ್ತುಗಳನ್ನು ವಿತರಿಸುವ ಮೂಲಕ ಪಾರದರ್ಶಕತೆ ಮೆರೆದಿದ್ದೇವೆ. ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ವಿವಿಧ ಸವಲತ್ತುಗಳನ್ನು ನೀಡುವ ಮೂಲಕ ಶ್ರಮಿಕರ ಕುರಿತ ನಮ್ಮ ಕಾಳಜಿಯನ್ನು ಮೆರೆದಿದ್ದೇವೆ. ಆಸಿಡ್ ದಾಳಿ ಸಂತ್ರಸ್ತರ ಮಾಸಾಶನ 10 ಸಾವಿರ ರೂ. ಗಳಿಗೆ ಹೆಚ್ಚಳ, ವಿವಿಧ ಮಾಸಾಶನಗಳ ಹೆಚ್ಚಳ, ಜನರ ಮನೆ ಬಾಗಿಲಿಗೆ ಸೇವೆಗಳನ್ನು ಒದಗಿಸುವ ಯೋಜನೆಗಳು ಮತ್ತಿತರ ಉಪಕ್ರಮಗಳೊಂದಿಗೆ ಸ್ಪಂದನಾ ಶೀಲ ಸರ್ಕಾರದ ಕರ್ತವ್ಯ ನಿಭಾಯಿಸಿದ್ದೇವೆ.

ರೈತರ ಆದಾಯ ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಒಕ್ಕಲುತನದ ಪ್ರತಿ ಹಂತದಲ್ಲಿಯೂ ರೈತರಿಗೆ ಬೆಂಗಾವಲಾಗಿ ಪ್ರೋತ್ಸಾಹಿಸಿದ್ದೇವೆ. ಬೆಂಬಲ ಬೆಲೆ ಯೋಜನೆಯಡಿ ದಾಖಲೆ ಪ್ರಮಾಣದ ರಾಗಿ ಖರೀದಿ, ಕುಚ್ಚಲಕ್ಕಿ ಖರೀದಿಗೆ ಅವಕಾಶ ಒದಗಿಸುವುದರೊಂದಿಗೆ ಪ್ರವಾಹ ಸಂದರ್ಭದಲ್ಲಿ NDRF ಪರಿಹಾರ ಧನದೊಂದಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಪರಿಹಾರವನ್ನು ದಾಖಲೆ ಅವಧಿಯಲ್ಲಿ ವಿತರಿಸಲಾಗಿದೆ.

ತೊಗರಿ ಬೆಳೆ, ಅಡಿಕೆ ಬೆಳೆಗೆ ರೋಗ ಬಾಧೆ, ರಾಸುಗಳಿಗೆ ಚರ್ಮಗಂಟು ರೋಗಬಾಧೆ ಸಂಭವಿಸಿದಾಗಲೂ ಸರ್ಕಾರ ರೈತರ ನೆರವಿಗೆ ಧಾವಿಸಿದೆ. ರೈತರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯುವುದನ್ನು ಉತ್ತೇಜಿಸಲು ಪ್ರಾರಂಭಿಸಲಾದ ರೈತ ವಿದ್ಯಾನಿಧಿ ಯೋಜನೆಯನ್ನು ಭೂರಹಿತ ಕೃಷಿ ಕೂಲಿ ಕಾರ್ಮಿಕರು, ನೇಕಾರರು, ಮೀನುಗಾರರು, ಟ್ಯಾಕ್ಸಿ ಚಾಲಕರು, ಆಟೋ ರಿಕ್ಷಾ ಚಾಲಕರ ಮಕ್ಕಳಿಗೆ ವಿಸ್ತರಿಸಿದ್ದೇವೆ.

 

 

Related