ಸಿದ್ದರಾಮಯ್ಯನೇ ಒಬ್ಬ ಅಲೆಮಾರಿ, ಯಾವ ಪಕ್ಷದಲ್ಲಿದ್ರೂ ಇವ್ರಿಗೆ ಅಧಿಕಾರ ಬೇಕು : ಈಶ್ವರಪ್ಪ

ಸಿದ್ದರಾಮಯ್ಯನೇ ಒಬ್ಬ ಅಲೆಮಾರಿ, ಯಾವ ಪಕ್ಷದಲ್ಲಿದ್ರೂ ಇವ್ರಿಗೆ ಅಧಿಕಾರ ಬೇಕು : ಈಶ್ವರಪ್ಪ

ಶಿವಮೊಗ್ಗ: ನೆಹರೂ ಮತ್ತು ಅವರ ಕಾಂಗ್ರೆಸ್ಸಿನ ನಾಯಕರು ದೇಶವನ್ನು ವಿಭಾಗ ಮಾಡಿದ್ರು. ಅಧಿಕಾರದ ಆಸೆಗೆ ಭಾರತಾಂಬೆಯನ್ನು ತುಂಡು ಮಾಡಿದವರು ಅವರು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆರ್​ಎಸ್​ಎಸ್, ಮೋದಿ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಎಚ್ಚರ ತಪ್ಪಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯಾವ ಲೆಕ್ಕ. ಪ್ರಧಾನಿ ನೆಹರೂ ಹಾಗೂ ಇವರಿಗೂ ಹೋಲಿಕೆಯೇ ಇಲ್ಲ ಎಂದಿದ್ದಾರೆ. ಆಕಾಶಕ್ಕೂ ಭೂಮಿಗೂ ಹೋಲಿಕೆ ಎಂದಿದ್ದಾರೆ.

ಪಾಕಿಸ್ತಾನ, ಹಿಂದೂಸ್ತಾನ ಎಂದು ದೇಶವನ್ನು ಬೇರೆ ಮಾಡಿದರು. ಮೋದಿ ಪ್ರಧಾನಿಯಾದ ಮೇಲೆ ಅರ್ಟಿಕಲ್ 370 ರದ್ದು ಮಾಡಿ ಕಾಶ್ಮೀರ ಸೇರಿಸಿದರು. ದೇಶದ ಸಂವಿಧಾನ, ಕಾನೂನು ಎಲ್ಲಾ ಕಡೆಗೆ ಒಂದೇ ಎಂದು ಸೇರಿಸಿದ್ದಾರೆ. ವಿದೇಶಿ ಕಾಂಗ್ರೆಸ್​ನಿಂದ ಬಂದವರು ಇಂದು ಆರ್​ಎಸ್​ಎಸ್ ಬಗ್ಗೆ ಮಾತನಾಡ್ತಾರೆ. ಮಾಜಿ ಸಿಎಂ ಸಿದ್ದರಾಮಯ್ಯನೇ ಒಬ್ಬ ಅಲೆಮಾರಿ. ಯಾವ ಪಕ್ಷದಲ್ಲಿ ಇದ್ದರೂ ಇವರಿಗೆ ಅಧಿಕಾರ ಬೇಕು. ಇವರೊಬ್ಬ ಅಧಿಕಾರದಾಹಿ. ಯಾವ ಪಕ್ಷದಲ್ಲಿದ್ದರೂ ಇವರಿಗೆ ವಿಪಕ್ಷನಾಯಕ ಸ್ಥಾನ, ಸಿಎಂ ಸ್ಥಾನ ಬೇಕು.

ಈ ಅಲೆಮಾರಿಗೆ ಆರ್​ಎಸ್​ಎಸ್ ಬಗ್ಗೆ ಕಲ್ಪನೆ ಇಲ್ಲ. ನಾವೆಲ್ಲರೂ ಆರ್​ಎಸ್​ಎಸ್ ಕಾರ್ಯಕರ್ತರು. ಇಲ್ಲಿ ಹುಟ್ಟಿ ಬೆಳೆದ ನಾವು ಭಾರತೀಯರಲ್ಲವಾ..? ಆರ್​ಎಸ್​ಎಸ್ ರಾಷ್ಟ್ರಭಕ್ತ, ಸಂಸ್ಕೃತಿಯ ಪರವಾಗಿ ಕೆಲಸ ಮಾಡುತ್ತಿದೆ. ಇಂದು ದೇಶ ಹಾಗೂ ರಾಜ್ಯದಲ್ಲಿ ಅನೇಕ ನಾಯಕರು ಆರ್​ಎಸ್​ಎಸ್​ನಿಂದ ಬಂದವರಿದ್ದಾರೆ. ಸಿದ್ದರಾಮಯ್ಯ ಮೊದಲು ದೇಶದ ಜನರ ಕ್ಷಮೆ ಕೇಳಬೇಕು. ಇನ್ನೆಂದೂ ಕೂಡ ಈ ರೀತಿಯಾಗಿ ಅವರು ಮಾತನಾಡಬಾರದು ಎಂದು ಒತ್ತಾಯಿಸಿದರು.

Related