ಬಿಜೆಪಿ ಸುಳ್ಳಿನ ಕಾರ್ಖಾನೆ : ಸಿದ್ದರಾಮಯ್ಯ

ಬಿಜೆಪಿ ಸುಳ್ಳಿನ ಕಾರ್ಖಾನೆ : ಸಿದ್ದರಾಮಯ್ಯ

ಬೆಂಗಳೂರು : ಬಿಜೆಪಿ ಸುಳ್ಳಿನ ಕಾರ್ಖಾನೆ  ಉತ್ಪಾದಿಸಿ ಹಂಚುತ್ತಿರುವ ಸುಳ್ಳುಗಳ ಕುರಿತು ಜನರಿಗೆ ಸತ್ಯ ಹೇಳುವುದರ ಜೊತೆಗೆ ಅರಿವು ಮೂಡಿಸುವಂತೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರಿಗೆ ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಸೋಮವಾರ ಪತ್ರ ಬರೆದು ಮನವಿ ಮಾಡಿದ್ದಾರೆ.

ರಚನಾತ್ಮಕ ಹೋರಾಟದ ಮೂಲಕ ಮನುಷ್ಯ ವಿರೋಧಿಯಾದ ಬಿಜೆಪಿಯ ಕ್ರೂರ ಹುನ್ನಾರಗಳನ್ನು ಬಯಲಿಗೆಳೆದು ಸೋಲಿಸುವುದೆ ಇಂದಿನ ಸಮಸ್ಯೆಗಳಿಗೆ ಪರಿಹಾರ. ಇದನ್ನು ಮಾಡಬೇಕೆಂದರೆ ಪಕ್ಷದ ಮುಖಂಡರು,ಕಾರ್ಯಕರ್ತರು ವಿಷಯಗಳನ್ನು ಅಧ್ಯಯನ ಮಾಡಿ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ತಿಳಿಸಿದ್ದಾರೆ.
2 ವರ್ಷ ಹಿಂದೆ ಸಾಧಾರಣ ಕುಟುಂಬವೊಂದು ಜೀವನ ನಡೆಸಲು ಸರಾಸರಿ 5000 ರೂ ಇದ್ದಿದ್ದು, ಈಗ 11000 ರೂ ಖರ್ಚು ಮಾಡಬೇಕಾದ ಪರಿಸ್ಥಿತಿಯಿದೆ. ಮನಮೋಹನಸಿಂಗ್ ಕಾಲದಲ್ಲಿ ಒಂದು ಲೀಟರ್ ಪೆಟ್ರೋಲ್ ಮೇಲೆ 9.21 ರೂ ಗಳಷ್ಟು ತೆರಿಗೆ ಇದ್ದರೆ ಈಗ 33 ರೂ, ಕೇಂದ್ರ ಸರ್ಕಾರವೊಂದೆ ವಸೂಲಿ ಮಾಡುತ್ತಿದೆ.
ರಾಜ್ಯದ ಬಿಜೆಪಿ ಸರ್ಕಾರ ಕೊರೋನ ರೋಗದಲ್ಲೂ ಹೆಣಗಳ ವಿಚಾರದಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. ಜನರ ಆಕ್ಸಿಜನ್, ವೆಂಟಿಲೇಟರ್, ಆಂಬ್ಯುಲೆನ್ಸ್, ಹಾಸಿಗೆ, ವೈದ್ಯರು, ಅಗತ್ಯ ಔಷಧಗಳೂ ಇಲ್ಲದೆ ಅನಾಥರಾಗಿ ಮರಣ ಹೊಂದಿದರು. ಈ ಸಾವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅದಕ್ಷತೆ, ನಿರ್ಲಕ್ಷ್ಯ, ಅದಮ್ಯ ಭ್ರಷ್ಟಾಚಾರಗಳಿಂದ ನಡೆದ ಕಗ್ಗೊಲೆಗಳು ಎನ್ನದೆ ವಿಧಿಯಿಲ್ಲ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ನಮ್ಮ ರಾಜ್ಯದಿಂದ ಆಯ್ಕೆಯಾದ 25 ಜನ ಸಂಸದರುಗಳಲ್ಲಿ ಒಬ್ಬರೂ ಸಹ ಪ್ರಶ್ನಿಸುತ್ತಿಲ್ಲ, ರಾಜ್ಯದ ಮೇಲಿನ ಕೇಂದ್ರದ ದಮನವನ್ನು ಪ್ರತಿಭಟಿಸುತ್ತಿಲ್ಲ. ರಾಜ್ಯದ ಬಿಜೆಪಿ ಸರ್ಕಾರವೂ ಪ್ರಶ್ನಿಸುತ್ತಿಲ್ಲ.

ಈ ರೀತಿಯ ಅನೇಕ ಸತ್ಯಗಳನ್ನು ಅಧ್ಯಯನ ಮಾಡಿ ತಾವುಗಳು ಜನರಿಗೆ ತಿಳಿಹೇಳಿ ಅರಿವನ್ನು ಉಂಟು ಮಾಡಬೇಕು. ಸುಳ್ಳಿನ ಕಾರ್ಖಾನೆ ಯಾದ ಬಿಜೆಪಿಯ ಎದುರು ಸತ್ಯದ ದೀಪವನ್ನು ಹಚ್ಚಿ, ದೇಶವನ್ನು ರಾಹು ಕೇತುಗಳಂತೆ ಆವರಿಸಿಕೊಂಡಿರುವ ಬಿಜೆಪಿಯನ್ನು ಸಂಪೂರ್ಣ ತೊಲಗಿಸಬೇಕೆಂದು ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.

Related