ಬೆಂಗಳೂರು: ಪತ್ರಕರ್ತ ಶಿವಕುಮಾರ ಬೆಳ್ಳಿತಟ್ಟೆ ಅವರು, ನಾಗರಿಕ ಸಮಸ್ಯೆಗಳು, ಕುಂದುಕೊರತೆಗಳ ವರದಿಗಾರಿಕೆಯಲ್ಲಿ ಸಿದ್ಧಹಸ್ತರು. ವಿಶೇಷವಾಗಿ ದಲಿತರು. ಹಿಂದುಳಿದ ಸಮುದಾಯದ ಸಮಸ್ಯೆಗಳನ್ನು ಬಿಂಬಿಸುವ ಲೇಖನಗಳಿಗೆ ಜೀವ ತುಂಬಿದವರು.
ಕರ್ನಾಟಕ ಮಾಧ್ಯಮ ಅಕಾಡೆಮಿಯು 2023ನೇ ಸಾಲಿನ ಪ್ರಶಸ್ತಿಗೆ ಶಿವಕುಮಾರ ಬೆಳ್ಳಿತಟ್ಟಿರವರನ್ನು ಆಯ್ಕೆ ಮಾಡಿದೆ. ಇವರು ಮೂಲತಃ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರು. ಚಾಮರಾಜನಗರ ಜಿಲ್ಲೆಯವರಾಗಿದ್ದು, 1975ರಲ್ಲಿ ಜನನ, ತಂದೆ ಎಂಪಿ ದೊಡ್ಡ ಬಸವಯ್ಯ, ತಾಯಿ ಮುತ್ತಮ್ಮ.
1998ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಪತ್ರಿಕೋದ್ಯಮದಲ್ಲಿ 24 ವರ್ಷಗಳ ಅನುಭವ ಹೊಂದಿದ್ದಾರೆ. ‘ಮಂಡ್ಯ ಸುದ್ದಿ’ ಪತ್ರಿಕೆ ವರದಿಗಾರನಾಗಿ ವೃತ್ತಿ ಬದುಕಿಗೆ ಪ್ರವೇಶ. ನಂತರ ‘ಉದಯ ನ್ಯೂಸ್’, ‘ಈ ಸಂಜೆ’, ‘ಟೈಮ್ಸ್ ಆಫ್ ಇಂಡಿಯಾ’ ಕನ್ನಡ ಆವೃತ್ತಿ ಪತ್ರಿಕೆಗಳಲ್ಲಿ ಪ್ರಧಾನ ವರದಿಗಾರ. ‘ಕನ್ನಡಪ್ರಭ’ದಲ್ಲಿ 11 ವರ್ಷಗಳ ಸೇವೆ, ಮುಖ್ಯ ವರದಿಗಾರ ಸೇರಿದಂತೆ ಹಲವು ಹುದ್ದೆಗಳ ಸಮರ್ಥ ನಿರ್ವಹಣೆ, ಪ್ರಸ್ತುತ ‘ವಿಶ್ವವಾಣಿ’ ಪತ್ರಿಕೆ ಸುದ್ದಿ ಸಂಪಾದಕರಾಗಿ ಮತ್ತು ಬೆಂಗಳೂರು ಪ್ರೆಸ್ ಕ್ಲಬ್ ಕಾರ್ಯದರ್ಶಿಯಾಗಿ ಶಿವಕುಮಾರ ಬೆಳ್ಳಿತಟ್ಟೆಯವರು ಕಾರ್ಯನಿರ್ವಹಿಸುತ್ತಿದ್ದಾರೆ.
ವಿಶೇಷ ವರದಿಗಳ ಮೂಲಕ ಸರ್ಕಾರಗಳ ಕಣ್ಣುತೆರೆಸಿ ಬಡವರಿಗೆ ನ್ಯಾಯ ಒದಗಿಸಿರುವ ಶಿವಕುಮಾರ ಅವರು, ದಾಖಲೆ ಸಹಿತ ವರದಿ ಪ್ರಕಟಿಸಿ ಸರ್ಕಾರದ ಆಸ್ತಿಗಳ ರಕ್ಷಣೆ, ಹತ್ತು ಹಲವು ಸರ್ಕಾರಿ ಯೋಜನೆಗಳ ದುರ್ಬಳಕೆ ತಡೆಗೆ ಕಾರಣರಾದರು. ಇದನ್ನೂ ಓದಿ: ಪತ್ರಕರ್ತರಿಗೆ ಸಿಹಿ ಸುದ್ದಿ ನೀಡಿದ ಡಿಸಿಎಂ
ಪತ್ರಕರ್ತರ ಸಂಘಟನೆಗಳಲ್ಲಿ ಸಕ್ರಿಯ ಹಾಗೂ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಮುಖ್ಯಮಂತ್ರಿ ಪರಿಹಾರ ನಿಧಿ, ಬಿಬಿಎಂಪಿಯಿಂದ ಚಿಕಿತ್ಸಾ ವೆಚ್ಚ ದೊರಕಿಸಲು ಸತತ ಪ್ರಯತ್ನ ನಡೆಸುವ ಸಹೃದಯಿ ಪತ್ರಿಕೋದ್ಯಮ ಸೇವೆ ಗುರುತಿಸಿ ಹಲವು ಸಂಘ ಸಂಸ್ಥೆಗಳು ಗೌರವ ಪುರಸ್ಕಾರ ನೀಡಿವೆ. 2005ರಲ್ಲಿ ಕೆಂಪೇಗೌಡ ಪ್ರಶಸ್ತಿ, ಮೀಡಿಯಾ ಅಸೋಸಿಯೇಷನ್ ಪ್ರಶಸ್ತಿ, ಚಾಮರಾಜನಗರ ಜಿಲ್ಲಾ ರೋಟರಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ.
ಪತ್ರಿಕೋದ್ಯಮದಲ್ಲಿನ ಸಾಧನೆ ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ 2023ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.