ಸಾರಿಗೆ ನಿಗಮಗಳ ಸೋರಿಕೆ ತಪ್ಪಿಸಿ ಲಾಭ ಹೆಚ್ಚಿಸಿ

  • In State
  • August 3, 2022
  • 206 Views
ಸಾರಿಗೆ ನಿಗಮಗಳ ಸೋರಿಕೆ ತಪ್ಪಿಸಿ ಲಾಭ ಹೆಚ್ಚಿಸಿ

ಬೆಂಗಳೂರು,.3- ಸೋರಿಕೆ ಹಾಗು ನಷ್ಟದ ಪ್ರಮಾಣವನ್ನು ಹತೋಟಿಗೆ ತಂದು ನಿಗಮಗಳನ್ನು ಲಾಭದತ್ತ ಕೊಂಡೊಯ್ಯದಿದ್ದರೆ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಶಿಸ್ತುಕ್ರಮ ಜರುಗಿಸುವುದಾಗಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಬಿಎಂಟಿಸಿ, ವಾಯುವ್ಯ, ಕಲ್ಯಾಣ ಕರ್ನಾಟಕ ಹಾಗೂ ಕೆಎಸ್‍ಆರ್‍ಟಿಸಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು ಸೋರಿಕೆ ಹಾಗೂ ನಷ್ಟ ತಡೆಗಟ್ಟುವ ಕುರಿತು ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದರು.

ಸಾರಿಗೆ ಸಂಸ್ಥೆ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ನಾಲ್ಕು ನಿಗಮಗಳಲ್ಲಿ ನೌಕರರಿಗೆ ತಿಂಗಳ ವೇತನ ನೀಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಸ್ಥೆಗೆ ಪದೇ ಪದೇ ನಷ್ಟ ಉಂಟಾದರೆ ನಿರ್ವಹಣೆ ಮಾಡುವುದು ಹೇಗೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ನಾವು ಬಸ್‍ಗಳನ್ನು ಕಾರ್ಯಾಚರಣೆ ನಡೆಸಲು ಸಾಧ್ಯವಾಗಲಿಲ್ಲ. ನೌಕರರಿಗೆ ಸಂಬಳವನ್ನು ನೀಡಲು ಸಾಧ್ಯವಾಗಿರಲಿಲ್ಲ. ಮಾನವೀಯತೆ ದೃಷ್ಟಿಯಿಂದ ನಾವು ವೇತನವನ್ನು ನೀಡಿದ್ದೇವೆ. ಆದರೆ ಸಂಸ್ಥೆಗೆ ಮಾತ್ರ ನಷ್ಟ ಹಾಗೂ ಸೋರಿಕೆ ನಿಂತಿಲ್ಲ ಎಂದು ಶ್ರೀರಾಮುಲು ಅಸಮಾಧಾನ ಹೊರಹಾಕಿದರು.

ಸತತ ಒಂದು ವರ್ಷಗಳಿಂದ ಸಂಸ್ಥೆಗಳು ನಿರಂತರವಾಗಿ ನಷ್ಟದಲ್ಲೇ ನಡೆಯುತ್ತಿವೆ. ಅದರಲ್ಲೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ, ವಾಯುವ್ಯ ಸಾರಿಗೆ ನಿಗಮ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಸಂಸ್ಥೆಗೆ ಬರುತ್ತಿರುವ ಆದಾಯದಿಂದಲೇ ವೇತನ ನೀಡಬೇಕು. ನಷ್ಟ ಹಾಗೂ ಸೋರಿಕೆ ತಡೆಗಟ್ಟಲು ತೆಗೆದುಕೊಂಡಿರುವ ಕ್ರಮಗಳನ್ನು ಅನುಷ್ಠಾನ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಪ್ರತಿ ಸಭೆಯಲ್ಲೂ ಒಂದಿಲ್ಲೊಂದು ಸಬೂಬುಗಳನ್ನು ಹೇಳುತ್ತಲೇ ಬಂದಿದ್ದೀರಿ. ಇನ್ನು ಮುಂದೆ ಇಂತಹ ಕಾರಣಗಳನ್ನು ಒಪ್ಪುವುದಿಲ್ಲ. ಕೂಡಲೇ ಸೋರಿಕೆ ಹಾಗೂ ನಷ್ಟವನ್ನು ತಡೆಗಟ್ಟಿ ಎಲ್ಲ ನಿಗಮಗಳನ್ನು ಲಾಭದತ್ತ ಮುನ್ನಡೆಯಬೇಕು. ಇದಕ್ಕೆ ಬೇಕಾದ ಸುಧಾರಣೆ ಕ್ರಮಗಳನ್ನು ನೀವೇ ತೆಗೆದುಕೊಳ್ಳಬೇಕೆಂದು ಸೂಚಿಸಿದ್ದಾರೆ.

 

Related