ಶಹಾಪುರ: ಕುರುಬ ಸಮಾಜವು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗಬೇಕಿದೆ. ಯಾರು ಕೀಳಲ್ಲ, ಯಾರು ಮೆಲಲ್ಲ ನಾವೆಲ್ಲರೂ ಒಂದೆ. ಪಕ್ಷಗಳ ಭೇದ ಮರೆತು ಸಮಾಜದ ಒಳಿತಿಗೆ ಎಲ್ಲರ ಕೈಜೋಡಿಸಬೇಕು ಎಂದು ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಹೇಳಿದರು.
ನಗರದ ನಗರಸಭೆ ಆವರಣದಲ್ಲಿ ತಾಲೂಕ ಆಡಳಿತ ವತಿಯಿಂದ ಆಯೋಜಿಸಿದ ದಾಸ ಶ್ರೇಷ್ಠ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಪ್ರಸ್ತುತ ಅಕ್ಷರ ಜ್ಞಾನ ಬೆಳೆದಷ್ಟು, ಜಾತಿ ತಾರತಮ್ಯ ಕಡಿಮೆಯಾಗುತ್ತಿದೆ. ಪ್ರತಿಯೊಂದ ಸಮುದಾಯದ ಮಹಾನ್ ವ್ಯಕ್ತಿಗಳನ್ನು ಸಂಕುಚಿತಗೊಳಿಸಿ ಒಂದು ಜಾತಿಗೆ ಸೀಮಿತಗೊಳಿಸಬೇಡಿ, ಭಾರತದಲ್ಲಿ ಜಾತಿ ನಿರ್ನಾಮ ಸಾಧ್ಯವಿಲ್ಲ ಎನ್ನುಷ್ಟೆ ಮಟ್ಟಿಗೆ ಅದು ಬೇರೂರಿದ ಸಮಯದಲ್ಲಿ ಅನೇಕರು ಜಾತಿ ತಾರತಮ್ಯದ ವಿರುದ್ಧ ಹೋರಾಡಿದ್ದಾರೆ, ಮಹಾಥ್ಮರನ್ನು ಎಲ್ಲ ವರ್ಗದ ಜನತೆ ಗೌರವಿಸಿ ಸ್ಮರಿಸುವಂಥ ವಾತಾವರಣ ನಿರ್ಮಾಣವಾಗಬೇಕು.
ಮಹನೀಯರ ಪ್ರತಿಮೆಗಳನ್ನು ನಿರ್ಮಿಸುವುದು ಜಯಂತಿ ಆಚರಿಸುವುದರಿಂದ ಮಾತ್ರವೇ ಅವರ ಆದರ್ಶಗಳಿಗೆ ಗೌರವ ಕೊಡುವುದಲ್ಲ, ಜಾತಿಯ ವಿನಾಶದತ್ತ ಚಿಂತನೆಗಳು ನಡೆಯಬೇಕು. ಕನಕದಾಸರ ಆದರ್ಶಗಳು ಇಂದಿನ ಯುವಜನತೆಗೆ ಜ್ಞಾನ, ಆತ್ಮಗೌರವ, ಸಮಾನತೆ ಮತ್ತು ಮಾನವೀಯತೆಯ ದಾರಿ ದೀಪವಾಗಲಿ. ಯುವಕ ಸಂಘಗಳು ಕೇವಲ ಆಚರಣೆಗಳಿಗೆ ಸೀಮಿತವಾಗದೆ ಮಹನೀಯರ ತತ್ವ, ಆದರ್ಶನಗಳನ್ನು ಜಾರಿಗೆ ತರಲು ಪ್ರಯತ್ನಿಸಬೇಕು ಎಂದರು.
ಯುವ ಸಾಹಿತಿ ಸಿದ್ದಣ್ಣ ಪೂಜಾರಿ ಯಕ್ಷಿಂತಿ ಕನಕದಾಸರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಪ್ರತಿಯೊಬ್ಬರು ಸಹೋದರತೆ, ಸಮಾನತೆ, ಮಾನವೀಯತೆ ಬೆಳೆಸಿಕೊಳ್ಳಿ, ದಾಸರ ಸಾಲಿನಲ್ಲಿ ಕನಕದಾಸರಿಗೆ ವಿಶಿಷ್ಟ ಸ್ಥಾನವಿದೆ. ಕೀರ್ತನಕಾರರಾಗಿ, ಕವಿಗಳಾಗಿ, ಸಾಹಿತ್ಯ, ಸಂಗೀತ, ಆಧ್ಯಾತ್ಮ, ಸಮಾಜ ಧರ್ಮ ಹೀಗೆ ಹಲವು ಸ್ತರಗಳಲ್ಲಿ ಕನಕದಾಸರ ಸಾಧನೆ ಸ್ಮರಣೀಯವಾಗಿದೆ. ಪ್ರಸ್ತುತ ಕುರುಬ ಸಮುದಾಯ ದೊಡ್ಡ ಹಾಗೂ ಅತಿಸಹಿಷ್ಣತೆಯ ಸಮುದಾಯ ಆದರೆ ಪ್ರಜ್ಞಾವಂತಿಕೆಯಲ್ಲಿ ಎಡುವುತ್ತಿದ್ದು, ಸಮಾಜದ ಹಿರಿಯರ ಮಾರ್ಗದರ್ಶನ ಅಗತ್ಯವಾಗಿದೆ.
ಕುರುಬ ಸಮಾಜದ ಯುವಕರೇ ನಿಮ್ಮ ಸಮಾಜದ ಹೊಣೆ ಹೊತ್ತುಕೊಳ್ಳಿ, ಇಲ್ಲವಾದರೆ ಮುಂದೊಂದು ದಿನ ತಳಪಾಯದಿಂದ ಸಂಘಟನೆ ಮಾಡಬೇಕಾಗುತ್ತದೆ. ಆದ್ದರಿಂದ ಪ್ರಶ್ನಿಸುವ ಗುಣ ಬೆಳೆಸುಕೊಳ್ಳಿ ಅಂದಾಗ ಸಮಾಜಕ್ಕೆ ಸಿಗಬೇಕಾದ ಸ್ಥಾನಮಾನಗಳು ತಾನಾಗಿಯೇ ಸಿಗುತ್ತವೆ. ಕೇವಲ ಒಂದು ಪಕ್ಷದ ನಾಯಕರಿಗೆ ಸೀಮಿತವಾಗದೇ ಪ್ರತಿಯೊಬ್ಬರೊಡನೆ ಬೇರೆತು ಸಮಾಜವನ್ನು ಉತ್ತುಂಗದ ಸ್ಥಾನಕ್ಕೆ ಕೊಂಡುಹೊಯ್ಯಬೇಕು ಎಂದರು.
ಅದ್ಧೂರಿ ಮೆರವಣಿಗೆ
ಸಾಮಾಜಿಕ ವ್ಯವಸ್ಥೆಯಲ್ಲಿ ಕನಕದಾಸರ ಕೊಡುಗೆ ಶ್ರೇಷ್ಠವಾಗಿದೆ. ಇವರ ಸಾಧನೆಯನ್ನು ಎಂದಿಗೂ ಮರೆಯುವಂತಿಲ್ಲ. ಕನಕದಾಸರ ಕೀರ್ತನೆಗಳು ಸಾಮಾಜಿಕ ಸಮಾನತೆ ಎತ್ತಿ ಹಿಡಿಯುವ ಜತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಯುವ ಮುಖಂಡ ಬಾಪುಗೌಡ ಎಸ್. ದರ್ಶನಾಪುರ ಹೇಳಿದರು.
ಕನಕ ನಗರದಲ್ಲಿರುವ ಕನಕದಾಸರ ನಾಮಫಲಕಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೇರವೇರಿಸಿದರು, ನಂತರ ಭಾವಚಿತ್ರ ಮೆರವಣಿಗೆ ಚಾಲನೆ ನೀಡಿ ಮಾತನಾಡಿದರು. ಈ ವೇಳೆ ಕುರುಬ ಸಮಾಜದ ಮುಖಂಡರು ಕಂಬಳಿ ಹೋದಿಸಿ ಸನ್ಮಾನಿಸಿದರು. ಬಳಿಕ ಡೊಳ್ಳು ಕುಣಿತದೊಂದಿಗೆ ಹಾಲಭಾವಿ ರಸ್ತೆಯಲ್ಲಿರುವ ಕನಕ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ನಗರಸಭೆ ವರೆಗೆ ಅದ್ಧೂರಿ ಮೆರವಣಿಗೆ ಸಾಗಿತು.
