ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಆಸ್ತಿ ಮಾಲೀಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸಿಹಿಸುದ್ದಿ ನೀಡಿದೆ. ನಗರದ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ಉಚಿತವಾಗಿ ವಾಟ್ಸಾಪ್ ಮೂಲಕ ಇ-ಖಾತಾ ಪ್ರಮಾಣಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ. ಇದರಿಂದ ಇ-ಖಾತಾ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲದೆ, ಮನೆಯಲ್ಲಿಯೇ ಕುಳಿತು ಪ್ರಮಾಣಪತ್ರ ಪಡೆದುಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಸಿಗಲಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಶಯ ಮತ್ತು ನಿರ್ದೇಶನದಂತೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರದ ಆರನೇ ಗ್ಯಾರಂಟಿ ಯೋಜನೆಯಾದ ‘ಭೂ-ಗ್ಯಾರಂಟಿ: ನನ್ನ ಖಾತಾ, ನನ್ನ ಹಕ್ಕು’ ಅಭಿಯಾನದಡಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿರುವ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ಈ ಸೌಲಭ್ಯ ದೊರೆಯಲಿದೆ. ಆಸ್ತಿ ಮಾಲೀಕರು ತಮ್ಮ ಇ-ಖಾತಾ ಪ್ರಮಾಣಪತ್ರವನ್ನು ಪಿಡಿಎಫ್ ರೂಪದಲ್ಲಿ ಹಾಗೂ ವಿಶಿಷ್ಟ ePID ಸಂಖ್ಯೆಯೊಂದಿಗೆ ವಾಟ್ಸಾಪ್ ಮೂಲಕ ನೇರವಾಗಿ ಪಡೆಯಲಿದ್ದಾರೆ.
ಇ-ಖಾತಾದಲ್ಲಿ ತಿದ್ದುಪಡಿ, ಮಾಲೀಕತ್ವ ಬದಲಾವಣೆಗೂ ಆನ್ಲೈನ್ ಅವಕಾಶ
ಇ-ಖಾತಾ ವಿತರಣೆ ಮಾತ್ರವಲ್ಲದೆ, ಪ್ರಮಾಣಪತ್ರದಲ್ಲಿ ತಿದ್ದುಪಡಿ ಮಾಡಿಸುವುದು ಹಾಗೂ ಆಸ್ತಿಯ ಮಾಲೀಕತ್ವ ಬದಲಾವಣೆ (ಮ್ಯುಟೇಷನ್) ಪ್ರಕ್ರಿಯೆಗೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಜಿಬಿಎಯ ಅಧಿಕೃತ ಇ-ಆಸ್ತಿ ಪೋರ್ಟಲ್ ಅನ್ನು ಸಾರ್ವಜನಿಕರಿಗೆ ಒದಗಿಸಲಾಗಿದೆ.
ಆಸ್ತಿ ಮಾಲೀಕರು https://GBAeAasthi.karnataka.gov.in ವೆಬ್ಸೈಟ್ಗೆ ಭೇಟಿ ನೀಡಿ ತಮ್ಮ ePID ಸಂಖ್ಯೆಯನ್ನು ಬಳಸಿಕೊಂಡು ಅಗತ್ಯ ಸೇವೆಗಳಿಗೆ ಅರ್ಜಿ ಸಲ್ಲಿಸಬಹುದು.
ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕ್ರಮ
ಈ ಹೊಸ ವ್ಯವಸ್ಥೆಯಿಂದ ಸಾರ್ವಜನಿಕರು ಇ-ಖಾತಾ ಪ್ರಮಾಣಪತ್ರ ಪಡೆಯಲು ಕಚೇರಿಗಳಿಗೆ ಭೇಟಿ ನೀಡುವ ಅಗತ್ಯ ಕಡಿಮೆಯಾಗಲಿದೆ. ಮಧ್ಯವರ್ತಿಗಳ ಅವಲಂಬನೆಯೂ ತಪ್ಪಲಿದ್ದು, ಸರ್ಕಾರಿ ಸೇವೆಗಳಲ್ಲಿ ಪಾರದರ್ಶಕತೆ ಮತ್ತು ವೇಗ ಹೆಚ್ಚಲಿದೆ ಎಂದು ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಇ-ಖಾತಾ ಸೇವೆ ಸಂಪೂರ್ಣ ಉಚಿತವಾಗಿದ್ದು, ಪ್ರಮಾಣಪತ್ರ ಪಡೆಯಲು ಯಾವುದೇ ಮಧ್ಯವರ್ತಿಗಳಿಗೆ ಹಣ ಪಾವತಿಸುವ ಅಗತ್ಯವಿಲ್ಲ. ಹೀಗಾಗಿ ಬೆಂಗಳೂರಿನ ಎಲ್ಲಾ ಆಸ್ತಿ ಮಾಲೀಕರು ತಮ್ಮ ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸಿ, ಇ-ಖಾತಾ ಪಿಡಿಎಫ್ ಪ್ರಮಾಣಪತ್ರವನ್ನು ಪಡೆದುಕೊಳ್ಳುವಂತೆ ಜಿಬಿಎ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಒಟ್ಟಾರೆ, ‘ನನ್ನ ಖಾತಾ, ನನ್ನ ಹಕ್ಕು’ ಅಭಿಯಾನದ ಮೂಲಕ ಆಸ್ತಿ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಗೆ ತರುವುದರ ಜೊತೆಗೆ ನಾಗರಿಕರಿಗೆ ಸರ್ಕಾರಿ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವ ಪ್ರಯತ್ನಕ್ಕೆ ಜಿಬಿಎ ಮುಂದಾಗಿದೆ.
