ವಾಷಿಂಗ್ಟನ್: ಜಾಗತಿಕ ವ್ಯಾಪಾರ ವಲಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದ್ದು, ಭಾರತ ಸೇರಿದಂತೆ 14 ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ. 25ರಷ್ಟು ಹೊಸ ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಪ್ರಸ್ತಾವನೆ ಮುಂದಿಟ್ಟಿದೆ. ಹೆಚ್ಚುವರಿ ಕೈಗಾರಿಕಾ ಉತ್ಪಾದನೆ ಹಾಗೂ ಕಡಿಮೆ ಬೆಲೆಯ ಸರಕುಗಳ ರಫ್ತಿನಿಂದ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಅಸಮತೋಲನವನ್ನು ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಅಮೆರಿಕದ ಹಿರಿಯ ಅಧಿಕಾರಿಯೊಬ್ಬರ ಮಾಹಿತಿಯನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿರುವ ಪ್ರಕಾರ, ಭಾರತ, ಚೀನಾ, ಬಾಂಗ್ಲಾದೇಶ, ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ ಒಟ್ಟು 14 ವ್ಯಾಪಾರ ಪಾಲುದಾರ ರಾಷ್ಟ್ರಗಳು ಈ ಹೊಸ ಸುಂಕದ ಪ್ರಸ್ತಾವನೆಯ ವ್ಯಾಪ್ತಿಗೆ ಬರಲಿವೆ.
ಈ ಪಟ್ಟಿಯಲ್ಲಿ ಭಾರತ, ಚೀನಾ, ಬಾಂಗ್ಲಾದೇಶ, ಕಾಂಬೋಡಿಯಾ, ಯುರೋಪಿಯನ್ ಯೂನಿಯನ್, ಇಂಡೋನೇಷ್ಯಾ, ಜಪಾನ್, ದಕ್ಷಿಣ ಕೊರಿಯಾ, ಮಲೇಷ್ಯಾ, ಸಿಂಗಾಪುರ, ಸ್ವಿಟ್ಜರ್ಲೆಂಡ್, ತೈವಾನ್, ಥೈಲ್ಯಾಂಡ್ ಮತ್ತು ವಿಯೆಟ್ನಾಂ ದೇಶಗಳು ಸೇರಿವೆ. ಭಾರತ ಸೇರಿದಂತೆ ಕೆಲವು ರಾಷ್ಟ್ರಗಳ ಆಮದು ಸರಕುಗಳ ಮೇಲೆ ಗರಿಷ್ಠ ಶೇ. 25ರಷ್ಟು ಸುಂಕ ವಿಧಿಸುವ ಪ್ರಸ್ತಾವನೆ ಮಾಡಲಾಗಿದೆ. ಚೀನಾದ ಸರಕುಗಳ ಮೇಲೆ ಶೇ. 20ರಷ್ಟು ಹೆಚ್ಚುವರಿ ಸುಂಕ ವಿಧಿಸಲು ಉದ್ದೇಶಿಸಲಾಗಿದೆ. ಇದು ಟ್ರಂಪ್ ಅವರ ಮೊದಲ ಅವಧಿಯಲ್ಲಿ ವಿಧಿಸಲಾಗಿದ್ದ ಸುಂಕಗಳಿಗೆ ಹೆಚ್ಚುವರಿಯಾಗಿರಲಿದೆ.
ಸುಂಕ ವಿಧಿಸಲು ಕಾರಣವೇನು?
ಕೆಲವು ರಾಷ್ಟ್ರಗಳು ತಮ್ಮ ದೇಶೀಯ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕಾ ಉತ್ಪನ್ನಗಳನ್ನು ತಯಾರಿಸಿ, ಹೆಚ್ಚುವರಿ ಸರಕುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿವೆ ಎಂಬುದು ಅಮೆರಿಕದ ಪ್ರಮುಖ ಆರೋಪವಾಗಿದೆ. ಇದರಿಂದ ಸ್ಥಳೀಯ ಉತ್ಪಾದಕರು ಮತ್ತು ಕೈಗಾರಿಕೆಗಳಿಗೆ ತೀವ್ರ ಸ್ಪರ್ಧೆ ಎದುರಾಗುತ್ತಿದೆ ಎಂದು ಟ್ರಂಪ್ ಆಡಳಿತ ಆತಂಕ ವ್ಯಕ್ತಪಡಿಸಿದೆ.
ವಿಶೇಷವಾಗಿ ಚೀನಾದ ರಫ್ತು ನೀತಿಗಳ ಬಗ್ಗೆ ಅಮೆರಿಕ ಅಸಮಾಧಾನ ಹೊಂದಿದೆ. ದೇಶೀಯ ಉತ್ಪಾದನೆಯನ್ನು ರಕ್ಷಿಸುವುದು ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗಳನ್ನು ನಿಯಂತ್ರಿಸುವುದು ಹೊಸ ಸುಂಕದ ಉದ್ದೇಶವಾಗಿದೆ.
ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ (ಯುಎಸ್ಟಿಆರ್) ಈ ಸಂಬಂಧ ದೇಶವಾರು ಸುಂಕದ ವಿವರಗಳನ್ನು ಫೆಡರಲ್ ರಿಜಿಸ್ಟರ್ನಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಈ ಪ್ರಸ್ತಾವನೆ ಜಾರಿಗೆ ಬಂದರೆ ಭಾರತದ ರಫ್ತು ವಲಯ ಹಾಗೂ ಅಮೆರಿಕದೊಂದಿಗಿನ ವ್ಯಾಪಾರ ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
