ಟೋಕಿಯೊ: ಕರ್ನಾಟಕದ ಕೈಗಾರಿಕಾ ಮತ್ತು ಉತ್ಪಾದನಾ ವಲಯಕ್ಕೆ ಮತ್ತೊಂದು ಮಹತ್ವದ ಉತ್ತೇಜನ ದೊರೆತಿದೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 5ನೇ ಹಂತದಲ್ಲಿರುವ ವಿಪ್ರೋ ಕವಾಸಕಿ ಪ್ರಿಸಿಷನ್ ಮೆಷಿನರಿ ಪ್ರೈವೇಟ್ ಲಿಮಿಟೆಡ್ ಘಟಕದ ವಿಸ್ತರಣೆಗೆ ಜಪಾನ್‌ನ ಕವಾಸಕಿ ಹೆವಿ ಇಂಡಸ್ಟ್ರೀಸ್ ಸಂಸ್ಥೆಯು ಮುಂದಿನ 10 ವರ್ಷಗಳಲ್ಲಿ ₹800 ಕೋಟಿವರೆಗೆ ಹೂಡಿಕೆ ಮಾಡಲು ಬದ್ಧತೆ ವ್ಯಕ್ತಪಡಿಸಿದೆ. ಈ ಯೋಜನೆಯಿಂದ ರಾಜ್ಯದಲ್ಲಿ ಸುಮಾರು 600 ಉನ್ನತ ಮಟ್ಟದ ಉತ್ಪಾದನಾ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಟೋಕಿಯೊದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರ ಸಮ್ಮುಖದಲ್ಲಿ ಈ ಸಂಬಂಧ ಒಪ್ಪಂದಕ್ಕೆ (MoU) ಸಹಿ ಹಾಕಲಾಯಿತು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕವಾಸಕಿ ಹೆವಿ ಇಂಡಸ್ಟ್ರೀಸ್‌ನ ಕೆಂಜಿ ಮಟ್ಸುಶಿತಾ ಹಾಗೂ ವಿಪ್ರೋ ಕವಾಸಕಿ ಪ್ರಿಸಿಷನ್ ಮೆಷಿನರಿಯ ಸಿಇಒ ಮಿನೋರು ಹಟ್ಸುಡಾ ಒಪ್ಪಂದವನ್ನು ವಿನಿಮಯ ಮಾಡಿಕೊಂಡರು.
ಎರಡು ಹಂತಗಳಲ್ಲಿ ಹೂಡಿಕೆ
ಈ ವಿಸ್ತರಣಾ ಯೋಜನೆಯನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ₹200ರಿಂದ ₹400 ಕೋಟಿ ಹಾಗೂ ಎರಡನೇ ಹಂತದಲ್ಲಿ ₹400ರಿಂದ ₹800 ಕೋಟಿ ಹೂಡಿಕೆ ಮಾಡುವ ಯೋಜನೆಯಿದೆ. ಘಟಕದಲ್ಲಿ ನಿರ್ಮಾಣ ಸಲಕರಣೆಗಳ ಉದ್ಯಮಕ್ಕೆ ಅಗತ್ಯವಿರುವ ಹೈಡ್ರಾಲಿಕ್ ಪಂಪ್‌ಗಳು, ಸ್ವಿಂಗ್ ಮೋಟಾರ್‌ಗಳು ಮತ್ತು ಇತರ ಪ್ರಮುಖ ಬಿಡಿಭಾಗಗಳನ್ನು ಉತ್ಪಾದಿಸಲಾಗುತ್ತದೆ.
2012ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ವಿಪ್ರೋ ಕವಾಸಕಿ ಪ್ರಿಸಿಷನ್ ಮೆಷಿನರಿ, ಭಾರತದ ಎಕ್ಸ್ಕಾವೇಟರ್ ಹೈಡ್ರಾಲಿಕ್ ಪಂಪ್ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಹೊಂದಿದೆ. ಹೊಸ ಹೂಡಿಕೆಯು ಈ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಕರ್ನಾಟಕದ ಎಂಜಿನಿಯರಿಂಗ್, ನಿರ್ಮಾಣ ಸಲಕರಣೆ ಮತ್ತು ಬಂಡವಾಳ ಸರಕುಗಳ ಉತ್ಪಾದನಾ ವಲಯಕ್ಕೆ ಹೆಚ್ಚಿನ ಬಲ ನೀಡಲಿದೆ.
ಜಪಾನ್ ಹೂಡಿಕೆಗೆ ಕರ್ನಾಟಕ ಆದ್ಯತೆಯ ರಾಜ್ಯ
2016ರಿಂದ ರಾಜ್ಯದಲ್ಲಿ 101 ಜಪಾನೀಸ್ ಗ್ರೀನ್‌ಫೀಲ್ಡ್ ಯೋಜನೆಗಳು ಅನುಷ್ಠಾನಗೊಂಡಿದ್ದು, 525ಕ್ಕೂ ಹೆಚ್ಚು ಜಪಾನೀಸ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಹೂಡಿಕೆ ಯೋಜನೆ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲು ಅಗತ್ಯವಾದ ಭೂಮಿ ಹಂಚಿಕೆ, ಸರ್ಕಾರಿ ಅನುಮೋದನೆಗಳು, ನಿರಾಕ್ಷೇಪಣಾ ಪತ್ರಗಳು ಹಾಗೂ ಅನ್ವಯವಾಗುವ ಪ್ರೋತ್ಸಾಹಕಗಳನ್ನು ಒದಗಿಸುವುದಾಗಿ ಕರ್ನಾಟಕ ಸರ್ಕಾರ ಭರವಸೆ ನೀಡಿದೆ.
ಇದೇ ಸಂದರ್ಭದಲ್ಲಿ, 2027ರ ಏಪ್ರಿಲ್ 20ರಿಂದ 22ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ‘ಇನ್ವೆಸ್ಟ್ ಕರ್ನಾಟಕ 2027’ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಮತ್ತು ಕೈಗಾರಿಕಾ ಸಚಿವರು ಕವಾಸಕಿ ಸಂಸ್ಥೆಯ ಪ್ರಮುಖರಿಗೆ ಆಹ್ವಾನ ನೀಡಿದ್ದಾರೆ.
