ನವದೆಹಲಿ: ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ನೇಪಾಳದ ಪ್ರಧಾನಿ ಬಾಲೇಂದ್ರ ‘ಬಾಲೆನ್’ ಶಾ ಅವರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಉಭಯ ನಾಯಕರ ನಡುವೆ ಮುಖಾಮುಖಿ ದ್ವಿಪಕ್ಷೀಯ ಸಭೆ ಹಾಗೂ ನಿಯೋಗ ಮಟ್ಟದ ಮಾತುಕತೆ ನಡೆಯಲಿದ್ದು, ಭಾರತ ಮತ್ತು ನೇಪಾಳ ನಡುವಿನ ರಾಜತಾಂತ್ರಿಕ, ಆರ್ಥಿಕ ಹಾಗೂ ಸಾರಿಗೆ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಯಲಿದೆ.
ಈ ಭೇಟಿಯ ಪ್ರಮುಖ ಆಕರ್ಷಣೆಯಾಗಿ ಉತ್ತರ ಪ್ರದೇಶದ ಅಯೋಧ್ಯೆಯನ್ನು ನೇಪಾಳದ ಜನಕಪುರ ಧಾಮ್ಗೆ ಸಂಪರ್ಕಿಸುವ ನೂತನ ಸಾಪ್ತಾಹಿಕ ‘ಸರಯು-ಕಮಲ ಎಕ್ಸ್ಪ್ರೆಸ್’ ರೈಲು ಸೇವೆಗೆ ಉಭಯ ಪ್ರಧಾನಿಗಳು ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ. ನವದೆಹಲಿಯಿಂದ ಹೊರಡುವ ಈ ರೈಲು ಸೇವೆಯು ಉಭಯ ದೇಶಗಳ ನಡುವಿನ ಧಾರ್ಮಿಕ ಪ್ರವಾಸೋದ್ಯಮ ಮತ್ತು ಜನರ ನಡುವಿನ ಸಂಪರ್ಕಕ್ಕೆ ಉತ್ತೇಜನ ನೀಡುವ ನಿರೀಕ್ಷೆಯಿದೆ.
ಮಾರ್ಚ್ 27ರಂದು ನೇಪಾಳದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬಾಲೇಂದ್ರ ಶಾ ಅವರ ಮೊದಲ ದ್ವಿಪಕ್ಷೀಯ ವಿದೇಶ ಪ್ರವಾಸ ಇದಾಗಿದೆ. ಇದಕ್ಕೂ ಮೊದಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಸೆಪ್ಟೆಂಬರ್ನಲ್ಲಿ ನ್ಯೂಯಾರ್ಕ್ಗೆ ಭೇಟಿ ನೀಡಿದ್ದರು.
ನೇಪಾಳದ ನೂತನ ಪ್ರಧಾನಿಗಳು ತಮ್ಮ ಮೊದಲ ದ್ವಿಪಕ್ಷೀಯ ವಿದೇಶ ಪ್ರವಾಸಕ್ಕೆ ಭಾರತವನ್ನು ಆಯ್ಕೆ ಮಾಡಿಕೊಳ್ಳುವುದು ದೀರ್ಘಕಾಲದ ರಾಜತಾಂತ್ರಿಕ ಸಂಪ್ರದಾಯವಾಗಿದೆ. ಆದರೆ, 2024ರಲ್ಲಿ ಕೆ.ಪಿ. ಶರ್ಮಾ ಓಲಿ ಅವರು ಮೊದಲಿಗೆ ಚೀನಾಕ್ಕೆ ಭೇಟಿ ನೀಡುವ ಮೂಲಕ ಈ ಸಂಪ್ರದಾಯವನ್ನು ಮುರಿದಿದ್ದರು.
ಭಾರತಕ್ಕೆ ಆಗಮಿಸಿದ ಬಾಲೇಂದ್ರ ಶಾ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಬಳಿಕ ಅವರು ರಾಜ್ಘಾಟ್ಗೆ ತೆರಳಿ ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಲಿದ್ದಾರೆ. ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ, ಹೈದರಾಬಾದ್ ಹೌಸ್ನಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಸುಮಾರು 30 ನಿಮಿಷಗಳ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
ವಾಯು ಸಂಪರ್ಕ, ಪುನರ್ನಿರ್ಮಾಣಕ್ಕೆ ಒತ್ತು
ಸಭೆಯಲ್ಲಿ ನೇಪಾಳದ ಭೈರಹವಾ ಮತ್ತು ಪೋಖರಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಸುಧಾರಿಸಲು ಭಾರತೀಯ ವಾಯುಪ್ರದೇಶದ ಮೂಲಕ ಹೆಚ್ಚುವರಿ ವಿಮಾನ ಮಾರ್ಗಗಳನ್ನು ಒದಗಿಸುವ ಬೇಡಿಕೆ ಪ್ರಮುಖವಾಗಿ ಚರ್ಚೆಯಾಗುವ ನಿರೀಕ್ಷೆಯಿದೆ.
ಇದರ ಜೊತೆಗೆ ವಿಪತ್ತುಗಳ ನಂತರದ ಪುನರ್ನಿರ್ಮಾಣಕ್ಕೆ ಭಾರತದ ನೆರವು, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಇತರ ದ್ವಿಪಕ್ಷೀಯ ವಿಚಾರಗಳ ಬಗ್ಗೆಯೂ ಮಾತುಕತೆ ನಡೆಯಲಿದೆ. ಸಭೆಯ ಬಳಿಕ ಉಭಯ ದೇಶಗಳು ತಿಳುವಳಿಕೆ ಒಪ್ಪಂದಗಳು ಹಾಗೂ ಜಂಟಿ ಹೇಳಿಕೆಗಳನ್ನು ವಿನಿಮಯ ಮಾಡಿಕೊಳ್ಳಲಿವೆ.
ಈ ಭೇಟಿಯು ಭಾರತ ಮತ್ತು ನೇಪಾಳ ನಡುವಿನ ಸ್ನೇಹ, ಸಹಕಾರ ಹಾಗೂ ಪ್ರಾದೇಶಿಕ ಸಂಪರ್ಕವನ್ನು ಮತ್ತಷ್ಟು ಗಟ್ಟಿಗೊಳಿಸುವ ಮಹತ್ವದ ಹೆಜ್ಜೆಯಾಗಿ ಗುರುತಿಸಿಕೊಂಡಿದೆ.
