ಸಿಡಿದೆದ್ದ ಅನ್ನದಾತರು ಬೃಹತ್ ಪ್ರತಿಭಟನೆ/ ‘ಶಹಾಪುರ ಬಂದ್ ಸಂಪೂರ್ಣ ಯಶಸ್ವಿ’
ಶಹಾಪುರ; ರೈತರು ಸಾಲಸೂಲ ಮಾಡಿ ಬೆಳೆದ ಬೆಳೆಗೆ ಜನವರಿ ವರೆಗೆ ನೀರು ಹರಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳು, ರೈತ ಮುಖಂಡರು ಕರೆ ನೀಡಲಾಗಿದ್ದ ಶಹಾಪುರ ಬಂದ್ಗೆ ನಿರೀಕ್ಷೆಕ್ಕಿಂತ ಹೆಚ್ಚಿನ ಬೆಂಬಲ ವ್ಯಕ್ತವಾಯಿತು. ಬಸವೇಶ್ವರ ವೃತ್ತದಲ್ಲಿ ಅನ್ನದಾತರು ಎತ್ತಿನ ಬಂಡಿಗಳನ್ನು ಕಟ್ಟಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.
ಶುಕ್ರವಾರ ಸಂತೆಯ ದಿನವಾಗಿದ್ದರಿಂದ ಹೆಚ್ಚಿನ ಟ್ರಾಫಿಕ್ ಕಂಡುಬಂದಿತು, ಇದರಿಂದ ಮಾರುಕಟ್ಟೆಗೆ ಬಂದಿದ್ದ ಜನತೆ ಮತ್ತು ವಾಹನಗಳ ಪ್ರಯಾಣಿಕರು ಪರದಾಡಿದರು. ಯಾವುರೇ ಕಾರಣಕ್ಕೂ ನೀರು ಕೊಡುವವರೆಗೂ ಕದಲುವುದಿಲ್ಲ ಎಂದು ರೈತರು ಎಚ್ಚರಿಸಿದರು.
ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಇನ್ನೂ ಉಳಿದ ಬೆರಳಣಿಕೆ ಅಂಗಡಿಗಳನ್ನು ರೈತ ಮುಖಂಡರು ನಡೆದುಕೊಂಡು ಅಂಗಡಿ ಬಂದ್ ಮಾಡುತ್ತ ಸಾಗಿದರು. ರೈತರು ಸಾಲಸೂಲ ಮಾಡಿ ಮೆಣಸಿನಕಾಯಿ, ಭತ್ತ, ಜೋಳ ಸೇರಿದಂತೆ ಹಲವಾರು ಬೆಳೆ ಹಾಕಿದ್ದು, ಈ ಬೆಳೆ ಉಳಿಸಲು ಜನವರಿ ವರೆಗೆ ನೀರು ಹರಿಸಲೇಬೇಕು ಎಂದು ಆಗ್ರಹಿಸಿದರು.
ಭೀಮರಾಯನಗುಡಿ ಯಿಂದ ಬಸವೇಶ್ವರ ವೃತ್ತದ ವರೆಗೆ ಕಾಲ್ನಡಿಗೆಯ ಮೂಲಕ ಪ್ರತಿಭಟನೆ ನಡೆಸಿ, ಬಸ್ನ್ನು ತಡೆದು ಪ್ರತಿಭಟನೆ ನಡೆಸಿ, ವೃತ್ತದಲ್ಲಿ ಧರಣಿ ಕೂತರು. ತಾಲೂಕಿನ ಸುತ್ತಲಿನ ಹಳ್ಳಿಗಳಿಂದ ಟ್ಯಾಂಕರ್, ಎತ್ತಿನ ಬಂಡಿಗಳ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ರೈತರು ಜಮಾವಣೆಗೊಂಡು ರಸ್ತೆ ಸಂಚಾರ ತಡೆದರು. ಇದನ್ನೂ ಓದಿ: ನಾಳೆ ಶಹಾಪುರ ಬಂದ್ ಗೆ ಕರೆ
ಈ ಭಾಗದ ರೈತರ ಬದುಕು ಸಂಪೂರ್ಣವಾಗಿ ನಾರಾಯಣಪುರ ಬಲದಂಡೆ ಹಾಗೂ ಎಡದಂಡೆ ಕಾಲುವೆಗಳ ನೀರಿನ ಮೇಲೆ ಅವಲಂಬಿತವಾಗಿದೆ. ರೈತರ ಕೃಷಿ ಬದುಕಿಗೆ ನೀರು ಅತ್ಯಗತ್ಯವಾಗಿದ್ದು, ಕಾಲುವೆ ನೀರು ಸ್ಥಗಿತಗೊಂಡರೆ ಸಾವಿರಾರು ರೈತ ಕುಟುಂಬಗಳ ಜೀವನೋಪಾಯಕ್ಕೆ ಹೊಡೆತ ಬೀಳಲಿದೆ. ಆದ್ದರಿಂದ ಸರ್ಕಾರ ರೈತರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ನೀರು ಹರಿಸುವ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅನ್ನದಾತರು ನೀರಿಗಾಗಿ ನಡೆಸುತ್ತಿರುವ ಪ್ರತಿಭಟನೆಗೆ ವಕೀಲರ ಸಂಘ, ವಿವಿಧ ಪಕ್ಷದ ಮುಖಂಡರು, ಚಿಕ್ಕಮಕ್ಕಳು ಸಹ ಸಾಥ್ ನೀಡಿದರು.
ನಾರಾಯಣಪುರ ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಿದೆ
ಆಲಮಟ್ಟಿ, ನಾರಾಯಣಪುರ ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಿದೆ. ಜಲಾಶಯದ ನೀರನ್ನು ನಂಬಿ ರೈತರು ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಈಗ ಬೆಳೆಗಳು ಕೈ ಸೇರುವ ಹಂತದಲ್ಲಿದ್ದಾಗ, ಕಾಲುವೆಗೆ ನೀರು ಬಿಡದೆ ಹೋದರೆ ಸಾವಿರಾರು ಕೋಟಿ ಮೌಲ್ಯದ ಬೆಳೆ ನಷ್ಟವಾಗಿ ರೈತರ ಬದುಕು ಬೀದಿಗೆ ಬೀಳಲಿದೆ ಇದರಿಂದ ರೈತರು ಸಾವಿಗೀಡಾಗುತ್ತಾರೆ. ಆದ್ದರಿಂದ ಮುಖ್ಯಮಂತ್ರಿ ಡಿ.ಕೆ ಶಿವುಕುಮಾರ ಅವರು ತಉಂಗಭದ್ರ ಜಲಾಶಯದ ಮೂಲಕ ರೈತರ ಹೋರಾಟಕ್ಕೆ ಮಣಿದು ನೀರು ಬಿಡುವುದುದಾಗಿ ಘೋಷಿಸಿದ್ದು, ಅದರಂತೆ ನಮಗೂ ನೀರು ಕೊಡಬೇಕು ಎಂದು ರೈತ ಮುಖಂಡರಾದ ಚೆನ್ನಪ್ಪ ಆನೇಗುಂದಿ ಹೇಳಿದರು.
ಫಲಪ್ರದವಾಗದ ಎಸ್ಪಿ ಬೇಟಿ
ಪ್ರತಿಭಟನಾ ಸ್ಥಳಕ್ಕೆ ಎಸ್ಪಿ ಪೃಥ್ವಿಕ್ ಶಂಕರ್ ಬೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದರು ಫಲಪ್ರದವಾಗಲಿಲ್ಲ. 11 ಗಂಟೆಯಿಂದ ಪ್ರಾರಂಭವಾದ ಪ್ರತಿಭಟನೆ ಸಂಜೆವರೆಗೆ ನಡೆಯಿತು. ಇದಕ್ಕೆ ರೈತರು ಕ್ಯಾರೆ ಎನ್ನದೇ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ನೀರು ಕೊಡಲೇ ಬೇಕು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕು ಎಂದು ಪಟ್ಟು ಹಿಡಿದರು. ಸರ್ಕಾರ ಕೂಡಲೇ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ಸರಕಾರದ ವಿರುದ್ಧ ಘೋಷಣೆ ಕೂಗಿದರು. ಸ್ಥಳದಲ್ಲಿದ್ದ ಪೊಲೀಸರು ಜನರ ಸಂಚಾರಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದ್ದರು.
ಪ್ರತಿಭಟನೆಯ ವೇಳೆ ತುರ್ತು ವೈದ್ಯಕೀಯ ಚಿಕಿತ್ಸೆಗೆ ತೆರಳುತ್ತಿದ್ದ ಆಂಬುಲೆನ್ಸ್ ವಾಹನದ ಸಂಚಾರಕ್ಕೆ ರೈತರು ಅನುವು ಮಾಡಿಕೊಟ್ಟರು. ಇದರಿಂದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ರೈತರು ತಕ್ಕ ಪಾಠ ಕಲಿಸುತ್ತಾರೆ
ಕಾಲುವೆಗಳಿಗೆ ನೀರು ಹರಿಸುವಂತೆ ಸುಮಾರು ಒಂದು ತಿಂಗಳುಗಳಿಂದ ಹೋರಾಟ ನಡೆಯುತ್ತಲೆ ಇದೆ, ಆದರೆ ಸರ್ಕಾರ ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲಾ. ಈ ಭಾಗದ ಜನಪ್ರತಿನೀಧಿಗಳು ಸಹ ಸರ್ಕಾರಕ್ಕೆ ಮೇಲಿಂದ ಮೇಲೆ ಒತ್ತಾಯಿಸುತ್ತಲೆ ಇದ್ದು, ಅವರಿಗೂ ಕಿಮ್ಮತ್ತು ನೀಡದ ಡಿ.ಕೆ ಶಿವಕುಮಾರ ಅವರಿಗೆ ರೈತರು ತಕ್ಕ ಪಾಠ ಕಲಿಸುತ್ತಾರೆ. ರೈತರ ಕಣ್ಣಲ್ಲಿ ಕಣ್ಣಿರು ತರಿಸುವ ಕೆಲಸವನ್ನು ಮಾಡಬೇಡಿ, ನಿಮಗೆ ರೈತರ ಶಾಪ ತಟ್ಟದೇ ಬಿಡಲ್ಲಾ. ರೈತರ ಬೇಡಿಕೆ ನಿರ್ಲಕ್ಷಿಸಿದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಬೇಕಾಗುತ್ತದೆ. ಎಂದು ರೈತ ಹೋರಾಟಗಾರರಾದ ಮಹೇಶ ಸುಬೇದಾರ ಎಚ್ಚರಿಕೆ ನೀಡಿದರು
ನಮಗೆ ಸರ್ಕಾರ ಬಿಕ್ಷುಕರಂತೆ ನೋಡುತ್ತಿದೆ
ಲಕ್ಷಾಂತರ ರೂಪಾಯಿ ಸಾಲಸೂಲ ಮಾಡಿಕೊಂಡು ಬೆಳೆದ ಬೆಳೆಗೆ ನ್ಯಾಯಯುತವಾಗಿ ನೀರು ಕೇಳುತ್ತಿರುವ ನಮಗೆ ಸರ್ಕಾರ ಬಿಕ್ಷುಕರಂತೆ ನೋಡುತ್ತಿದೆ. ರೈತರು ನಿಮ್ಮ ಮನೆಯ ಆಸ್ತಿಯನ್ನು ಕೇಳುತ್ತಿಲ್ಲ, ನಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ನೀರು ಕೊಡಿ ಸಾಕು, ರೈತರ ಪರವಾಗಿ ನಿಲ್ಲುವ ಜನಪ್ರತಿಧಿಗಳಿಗೆ ರೈತರು ಖುಣಿಯಾಗಿರಲಿದ್ದಾರೆ ಎಂದು ರೈತ ಮುಖಂಡರಾದ ಶರಣು ಮಂದರವಾಡ ಹೇಳಿದರು.
ಬಂದ್ ಬೆಂಬಲಿಸಿ ಬಸವೇಶ್ವರ ವೃತ್ತದಲ್ಲಿ ಎಲ್ಲ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಪೆಟ್ರೋಲ್ ಬಂಕ್, ಆಸ್ಪತ್ರೆ, ಔಷಧ ಅಂಗಡಿ ಎಂದಿನAತೆ ಕಾರ್ಯನಿರ್ವಹಿಸಿದವು. ಪ್ರತಿಭಟನಾಕಾರರು 4-5 ಗಂಟೆಗಳ ಕಾಲ ನಗರದಿಂದ ಹಾದು ಹೋಗುವ ಬಸ್ ಬೃಹತ್ ಸರಕು ಸಾಗಾಟ ವಾಹನಗಳಿಗೆ ಬಂದ್ ಬಿಸಿ ತಟ್ಟಿತು. ಬಸ್ ಸಿಗದೇ ಗ್ರಾಮೀಣ ಜನತೆ ಬಸ್ ನಿಲ್ದಾಣದಲ್ಲಿ ಮಲಗಿದ ದೃಶ್ಯ ಕಂಡುಬಂದಿತು.
ರೈತರ ಹೋರಾಟ ಪರಿಣಾಮ ಸರ್ಕಾರ ಆದಷ್ಟು ಬೇಗ ಅನುಭವಿಸಲಿದೆ. ಕೂಡಲೇ ಸರಿಯಾದ ನಿರ್ಣಯ ತೆಗೆದುಕೊಂಡು ರೈತರಿಗೆ ನೀರನ್ನು ಕೊಡಬೇಕು ಎಂದು ಮಲ್ಲಿಕಾರ್ಜುನ ಸತ್ಯಂಪೇಟೆ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಎಂ ಸಾಗರ, ಆಜಿ ಮಸ್ತಾನ್, ರಮೇಶ ಸುಂಕೇಶ್ವರಹಾಳ, ಶರಣಪ್ಪ ಸಾಹು, ಮಹಾದೇವಪ್ಪಗೌಡ ಪಾಟೀಲ್, ರಮೇಶ ಗಾಂಜಿ, ಭೀಮರಾಯ ಪೂಜಾರಿ, ವಿಶ್ವಾಸರೆಡ್ಡಿ ಗೋಗಿ ಸೇರಿದಂತೆ ಸಾವಿರಾರು ರೈತರು ಇದ್ದರು.
