ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ), ರೋಬೋಟಿಕ್ಸ್, ಡೀಪ್ಟೆಕ್, ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಜಾಗತಿಕ ತಂತ್ರಜ್ಞಾನ ಕೇಂದ್ರವನ್ನಾಗಿ ರೂಪಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ 29ನೇ ಬೆಂಗಳೂರು ಟೆಕ್ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ತಂತ್ರಜ್ಞಾನ ಆಧಾರಿತ ಹೂಡಿಕೆ, ಸಂಶೋಧನೆ, ನವೋದ್ಯಮಗಳ ಬೆಳವಣಿಗೆ ಮತ್ತು ಯುವಜನರ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು. ‘ಎಐ ಅಂಡ್ ಬಿಯಾಂಡ್’ ಎಂಬ ವಿಷಯದಡಿ ನಡೆಯುತ್ತಿರುವ ಈ ಶೃಂಗಸಭೆಯಲ್ಲಿ 75ಕ್ಕೂ ಹೆಚ್ಚು ದೇಶಗಳು ಭಾಗವಹಿಸಿರುವುದು ಕರ್ನಾಟಕದ ತಂತ್ರಜ್ಞಾನ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಭಾರತದ ಸಾಫ್ಟ್ವೇರ್ ಮತ್ತು ಸೇವೆಗಳ ರಫ್ತು ಆದಾಯದಲ್ಲಿ ಪ್ರತಿ ಐದು ಡಾಲರ್ಗೆ ಎರಡು ಡಾಲರ್ ಕರ್ನಾಟಕದ ಪಾಲಾಗಿದೆ. ಕಳೆದ ವರ್ಷ ರಾಜ್ಯದ ಸಾಫ್ಟ್ವೇರ್ ಮತ್ತು ಸೇವೆಗಳ ರಫ್ತು ಆದಾಯ 173 ಬಿಲಿಯನ್ ಡಾಲರ್ ತಲುಪಿದೆ. 2025-26ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ರಾಜ್ಯಕ್ಕೆ 9.4 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆ ಹರಿದುಬಂದಿದ್ದು, ಇದು ದೇಶದ ಒಟ್ಟು ಎಫ್ಡಿಐನ ಶೇ.26.7ರಷ್ಟಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ 1,000ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ 24,000ಕ್ಕೂ ಹೆಚ್ಚು ಮಾನ್ಯತೆ ಪಡೆದ ಸ್ಟಾರ್ಟ್ಅಪ್ಗಳಿದ್ದು, ದೇಶದ ಪ್ರತಿ ಐದು ಯುನಿಕಾರ್ನ್ಗಳಲ್ಲಿ ಸುಮಾರು ಎರಡು ಕರ್ನಾಟಕದ ಕೊಡುಗೆಯಾಗಿವೆ. ಸ್ಟಾರ್ಟ್ಅಪ್ಗಳ ಅಭಿವೃದ್ಧಿಗೆ ಸರ್ಕಾರ ವಿವಿಧ ಅನುದಾನ ಮತ್ತು ವೇಗವರ್ಧಕ ಯೋಜನೆಗಳನ್ನು ಜಾರಿಗೊಳಿಸಿದೆ.
‘ELEVATE’ ಯೋಜನೆಯಡಿ ಕಳೆದ ಹತ್ತು ವರ್ಷಗಳಲ್ಲಿ ಸುಮಾರು 1,500 ಸ್ಟಾರ್ಟ್ಅಪ್ಗಳಿಗೆ ನೆರವು ನೀಡಲಾಗಿದೆ. ‘ELEVATE NEXT’ ಮೂಲಕ ಡೀಪ್ಟೆಕ್ ಉದ್ಯಮಗಳಿಗೆ ತಲಾ ಒಂದು ಕೋಟಿ ರೂಪಾಯಿ ಅನುದಾನ ಒದಗಿಸಲಾಗುತ್ತಿದೆ. ಅಲ್ಲದೆ, ‘Government First’ ಯೋಜನೆಯಡಿ ನವೀನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಸ್ಟಾರ್ಟ್ಅಪ್ಗಳಿಗೆ ಸರ್ಕಾರವೇ ಮೊದಲ ಗ್ರಾಹಕವಾಗಲಿದ್ದು, ಇದಕ್ಕಾಗಿ 25 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಘೋಷಿಸಿದರು.
ಕೃತಕ ಬುದ್ಧಿಮತ್ತೆ ಕ್ಷೇತ್ರದ ಬೆಳವಣಿಗೆಗೆ ಬೆಂಗಳೂರಿನಲ್ಲಿ ಭಾರತದ ಮೊದಲ ಎಐ ವಿಶ್ವವಿದ್ಯಾಲಯ ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ. ರಾಯಚೂರಿನ IIITಯಲ್ಲಿ ಅತ್ಯಾಧುನಿಕ ಎಐ ಕೇಂದ್ರ ಸ್ಥಾಪಿಸಿ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಸಣ್ಣ ಕೈಗಾರಿಕೆಗಳಿಗೆ ಎಐ ತಂತ್ರಜ್ಞಾನ ತಲುಪಿಸುವ ಉದ್ದೇಶವಿದೆ.
ಇದಲ್ಲದೆ, ಬೆಂಗಳೂರಿನಲ್ಲಿ ‘BRAINZ’ ಯೋಜನೆಯಡಿ ರೋಬೋಟಿಕ್ಸ್ ಮತ್ತು ಎಐ ಸಂಶೋಧನೆ, ಉತ್ಪನ್ನಗಳ ಅಭಿವೃದ್ಧಿ ಹಾಗೂ ಉತ್ಪಾದನೆಗೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸಲಾಗುವುದು. ಈ ಮೂಲಕ ಕರ್ನಾಟಕವನ್ನು ಮುಂದಿನ ತಂತ್ರಜ್ಞಾನ ಕ್ರಾಂತಿಯ ಪ್ರಮುಖ ಜಾಗತಿಕ ಶಕ್ತಿಯನ್ನಾಗಿ ರೂಪಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
