ಬೆಂಗಳೂರು: ನಗರದ ಐತಿಹಾಸಿಕ ಕುಮಾರ ಕೃಪಾ (ಕೆಕೆ) ಅತಿಥಿ ಗೃಹದ ಹಳೆಯ ಕಟ್ಟಡವನ್ನು ನವೀಕರಿಸಿರುವ ರಾಜ್ಯ ಸರ್ಕಾರ, ಅದಕ್ಕೆ ‘ಗಂಗಾ’ ಎಂದು ಮರುನಾಮಕರಣ ಮಾಡಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ನಿವಾಸವೆಂದು ಘೋಷಿಸಿದೆ.
ಕಾರ್ತಿಕ ಮಾಸದ ಶುಭ ಸೋಮವಾರದಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕುಟುಂಬ ಸಮೇತರಾಗಿ ನೂತನ ನಿವಾಸ ‘ಗಂಗಾ’ದಲ್ಲಿ ಶಾಸ್ತ್ರೋಕ್ತವಾಗಿ ಗೃಹಪ್ರವೇಶ ಮಾಡಲಿದ್ದಾರೆ.
ಈ ಹಿಂದೆ ‘ಕಾವೇರಿ’ ನಿವಾಸ ಮತ್ತು ‘ಕೃಷ್ಣ’ ಗೃಹ ಕಚೇರಿಗೆ ನದಿಗಳ ಹೆಸರನ್ನು ಇಟ್ಟಿರುವ ಮಾದರಿಯಲ್ಲೇ ಇದೀಗ ಕುಮಾರ ಕೃಪಾ ಅತಿಥಿ ಗೃಹಕ್ಕೆ ‘ಗಂಗಾ’ ಎಂದು ಹೆಸರಿಡಲಾಗಿದೆ. ವಿಶೇಷವೆಂದರೆ, ಈ ನಿವಾಸದ ಒಳಗಿನ ಕೊಠಡಿಗಳಿಗೂ ದೇಶದ ವಿವಿಧ ನದಿಗಳ ಹೆಸರನ್ನು ನಾಮಕರಣ ಮಾಡಲಾಗಿದೆ. ಗೃಹಪ್ರವೇಶದ ಹಿನ್ನೆಲೆಯಲ್ಲಿ ನವೀಕೃತ ಕಟ್ಟಡದಲ್ಲಿ ಭಾನುವಾರ ರಾತ್ರಿ ವಿಶೇಷ ಹೋಮ-ಹವನಗಳನ್ನು ನೆರವೇರಿಸಲಾಗಿದ್ದು, ನಿವಾಸದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಸುಮಾರು 160 ವರ್ಷಗಳ ಇತಿಹಾಸ ಹೊಂದಿರುವ ಈ ಪಾರಂಪರಿಕ ಕಟ್ಟಡವನ್ನು 1880ರಲ್ಲಿ ಕಲ್ಲಿನಿಂದ ಎರಡು ಅಂತಸ್ತುಗಳಲ್ಲಿ ನಿರ್ಮಿಸಲಾಗಿತ್ತು. 12 ಕೊಠಡಿಗಳು, ವಿಶಾಲವಾದ ಹಾಲ್ ಹಾಗೂ ಅಡುಗೆಮನೆ ಹೊಂದಿರುವ ಈ ಕಟ್ಟಡ ಆರಂಭದಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ಖಾಸಗಿ ನಿವಾಸವಾಗಿತ್ತು. ಕುಮಾರಸ್ವಾಮಿ ದೇವರ ಕೃಪೆಯಿಂದ ನಿರ್ಮಾಣವಾದ ಕಟ್ಟಡ ಎಂಬ ಅರ್ಥದಲ್ಲಿ ಇದಕ್ಕೆ ‘ಕುಮಾರ ಕೃಪಾ’ ಎಂಬ ಹೆಸರು ಬಂದಿತ್ತು.
1918ರಲ್ಲಿ ಸರ್ಕಾರ ಈ ಕಟ್ಟಡವನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡು ಅತಿಥಿ ಗೃಹವನ್ನಾಗಿ ಪರಿವರ್ತಿಸಿತ್ತು. 1927ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇದೇ ಕಟ್ಟಡದಲ್ಲಿ ವಾಸ್ತವ್ಯ ಹೂಡಿದ್ದರು. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರೂ ಈ ಕಟ್ಟಡದಲ್ಲಿ ವಾಸವಿದ್ದರು ಎಂಬುದು ಇದರ ಐತಿಹಾಸಿಕ ಮಹತ್ವವನ್ನು ಹೆಚ್ಚಿಸಿದೆ.
2026ರಲ್ಲಿ ಲೋಕೋಪಯೋಗಿ ಇಲಾಖೆ (PWD) ವತಿಯಿಂದ ಕಟ್ಟಡವನ್ನು ನವೀಕರಿಸಿ ಪಾರಂಪರಿಕ ಸೊಬಗಿಗೆ ಧಕ್ಕೆಯಾಗದಂತೆ ಹೊಸ ರೂಪ ನೀಡಲಾಗಿದೆ. ಇದೀಗ ‘ಗಂಗಾ’ ಎಂಬ ಹೊಸ ಹೆಸರಿನೊಂದಿಗೆ ಈ ಐತಿಹಾಸಿಕ ಕಟ್ಟಡ ಮುಖ್ಯಮಂತ್ರಿ ಅವರ ಅಧಿಕೃತ ನಿವಾಸವಾಗಿ ಹೊಸ ಅಧ್ಯಾಯ ಆರಂಭಿಸಲಿದೆ.
