ಮಂಗಳೂರು: ಬೆಂಗಳೂರು–ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಶುಕ್ರವಾರ ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಈ ಮೂಲಕ ಕರಾವಳಿ ಕರ್ನಾಟಕ, ಬೆಂಗಳೂರು ಹಾಗೂ ಗೋವಾ ನಡುವಿನ ರೈಲು ಸಂಪರ್ಕಕ್ಕೆ ಮತ್ತಷ್ಟು ವೇಗ ಮತ್ತು ಆಧುನಿಕತೆಯ ಸ್ಪರ್ಶ ದೊರೆತಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, ಹಲವು ಸವಾಲುಗಳ ನಡುವೆಯೂ ವಂದೇ ಭಾರತ್ ರೈಲು ಸೇವೆಯ ಕನಸು ಸಾಕಾರಗೊಂಡಿದೆ ಎಂದು ಹೇಳಿದರು. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ಮಾದರಿ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಲು ₹94 ಕೋಟಿ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಬಳಿಕ ಸಚಿವರು ಸಂಸದರಾದ ಕ್ಯಾ. ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಜನಪ್ರತಿನಿಧಿಗಳೊಂದಿಗೆ ವಂದೇ ಭಾರತ್ ರೈಲಿನಲ್ಲಿ ಮಂಗಳೂರಿನಿಂದ ಸುಬ್ರಹ್ಮಣ್ಯ ರೋಡ್ ನಿಲ್ದಾಣದವರೆಗೆ ಪ್ರಯಾಣಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಪ್ರಧಾನಿ ನರೇಂದ್ರ ಮೋದಿ ಅವರು ಕರಾವಳಿ ಜನತೆಗೆ ನೀಡಿದ ದೀಪಾವಳಿ ಉಡುಗೊರೆ ಇದಾಗಿದೆ. ಕರಾವಳಿ ಕರ್ನಾಟಕದ ಪಾಲಿಗೆ ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದರು. ಪಶ್ಚಿಮ ಘಟ್ಟಗಳ ಹಸಿರು ಪರಿಸರದ ನಡುವೆ ಕೇಸರಿ ಬಣ್ಣದ ವಂದೇ ಭಾರತ್ ರೈಲು ಸಂಚರಿಸುವುದು ಹೆಮ್ಮೆಯ ಸಂಗತಿ ಎಂದರು.
ಮಂಗಳೂರಿನ ರೈಲ್ವೆ ಹಳಿಗಳು ಕೊಂಕಣ ರೈಲ್ವೆ, ದಕ್ಷಿಣ ರೈಲ್ವೆ ಮತ್ತು ನೈರುತ್ಯ ರೈಲ್ವೆ ವಿಭಾಗಗಳ ನಡುವೆ ಹಂಚಿಕೆಯಾಗಿದ್ದರಿಂದ ಕಾರ್ಯಾಚರಣೆಯಲ್ಲಿ ಗೊಂದಲ ಉಂಟಾಗುತ್ತಿತ್ತು. ಎಲ್ಲವನ್ನೂ ಒಂದೇ ವಿಭಾಗದಡಿ ತರುವ ಸ್ಥಳೀಯರ ಬೇಡಿಕೆಯನ್ನು ಸಚಿವ ಅಶ್ವಿನಿ ವೈಷ್ಣವ್ ಈಡೇರಿಸಿದ್ದಾರೆ. ಇದರಿಂದ ರೈಲ್ವೆ ಕ್ಷೇತ್ರದಲ್ಲಿ ಮಂಗಳೂರಿಗೆ ಹೆಚ್ಚಿನ ಆದ್ಯತೆ ದೊರೆತಿದೆ ಎಂದು ಹೇಳಿದರು.
ಮಂಗಳೂರು–ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು ಸೇವೆಯ ಮರುಚಾಲನೆ ಹಾಗೂ ಸುಬ್ರಹ್ಮಣ್ಯ ರೋಡ್–ಸಕಲೇಶಪುರ ನಡುವಿನ ರೈಲು ಮಾರ್ಗದ ವಿದ್ಯುದೀಕರಣವೂ ಪ್ರಮುಖ ಸಾಧನೆಗಳಾಗಿವೆ. ಸುಮಾರು ₹100 ಕೋಟಿ ವೆಚ್ಚದ ವಿದ್ಯುದೀಕರಣ ಯೋಜನೆ ಪೂರ್ಣಗೊಂಡಿದ್ದು, ಸುಬ್ರಹ್ಮಣ್ಯ ರೋಡ್ ನಿಲ್ದಾಣವನ್ನು ಅಮೃತ್ ಭಾರತ್ ಯೋಜನೆಯಡಿ ₹25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ರೈಲ್ವೆ ಯೋಜನೆಗಳಿಗೆ ವೇಗ ದೊರೆತಿದೆ ಎಂದರು. ಶಾಸಕ ವೇದವ್ಯಾಸ ಕಾಮತ್ ಅವರು ಗೋವಾ ಮತ್ತು ಬೆಂಗಳೂರಿಗೆ ವೇಗವಾಗಿ ಪ್ರಯಾಣಿಸುವ ಕರಾವಳಿಗರ ಕನಸು ನನಸಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಪಾಂಡೇಶ್ವರ ರೈಲ್ವೆ ಕ್ರಾಸಿಂಗ್ ಸಮಸ್ಯೆ ಪರಿಹಾರಕ್ಕೆ ವಿಶೇಷ ತಂಡ ಕಳುಹಿಸುವ ಭರವಸೆಯನ್ನು ರೈಲ್ವೆ ಸಚಿವರು ನೀಡಿದ್ದಾರೆ ಎಂದರು.
ಯಶವಂತಪುರದಿಂದ ಮಡಗಾಂವ್‌ವರೆಗೆ ಸಂಚರಿಸುವ ಸುಮಾರು 850 ಕಿ.ಮೀ. ಉದ್ದದ ವಂದೇ ಭಾರತ್ ರೈಲು ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಮಂಗಳೂರು, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್ ಮತ್ತು ಕಾರವಾರ ಸೇರಿದಂತೆ ಪ್ರಮುಖ ನಿಲ್ದಾಣಗಳನ್ನು ಸಂಪರ್ಕಿಸಲಿದೆ.
ಈ ರೈಲು ಸೇವೆಯಿಂದ ಬೆಂಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಗೋವಾದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಕರಾವಳಿ ಪ್ರದೇಶದ ಪ್ರವಾಸೋದ್ಯಮಕ್ಕೂ ಹೊಸ ಉತ್ತೇಜನ ದೊರೆಯಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮದಲ್ಲಿ ಶಾಸಕರಾದ ಭಾಗೀರಥಿ ಮುರುಳ್ಯ, ಡಾ. ವೈ. ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಉಳಿಪಾಡಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
