ಹಾಸನ: ನಾಡಿನ ಪ್ರಸಿದ್ಧ ಶಕ್ತಿ ದೇವತೆ ಹಾಸನಾಂಬೆ ದೇವಾಲಯದ ಬಾಗಿಲನ್ನು ಇಂದು ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಮುಚ್ಚಲಾಯಿತು. ಗರ್ಭಗುಡಿಯಲ್ಲಿ ದೇವಿಗೆ ಕೊನೆಯ ಆರತಿ ನೆರವೇರಿಸಿದ ಅರ್ಚಕರು, ದೀಪ ಬೆಳಗಿಸಿ, ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಾಲಯದ ಬಾಗಿಲನ್ನು ಮುಚ್ಚುವ ಮೂಲಕ ಈ ವರ್ಷದ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.
ಈ ಸಂದರ್ಭದಲ್ಲಿ ಸಚಿವ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಧಿಕಾರಿ ಲತಾ ಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮುಂಜಾನೆ 6 ಗಂಟೆಯವರೆಗೂ ಭಕ್ತರಿಗೆ ದೇವಿಯ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ವರ್ಷದ ಜಾತ್ರಾ ಮಹೋತ್ಸವ ಭಕ್ತರ ದಾಖಲೆಯ ಆಗಮನಕ್ಕೆ ಸಾಕ್ಷಿಯಾಗಿದೆ. ಅಕ್ಟೋಬರ್ 30ರಿಂದ ನವೆಂಬರ್ 11ರ ಬೆಳಗಿನವರೆಗೆ 30 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆಯ ದರ್ಶನ ಪಡೆದಿದ್ದಾರೆ.
ಇನ್ನು ₹1,000 ಮತ್ತು ₹300 ಮುಖಬೆಲೆಯ ವಿಶೇಷ ದರ್ಶನದ ಟಿಕೆಟ್‌ಗಳ ಮಾರಾಟ ಹಾಗೂ ಲಾಡು ಪ್ರಸಾದದಿಂದ ದೇವಸ್ಥಾನಕ್ಕೆ ಒಟ್ಟು ₹25 ಕೋಟಿ 36 ಲಕ್ಷ ಆದಾಯ ಸಂಗ್ರಹವಾಗಿದೆ. ಭಕ್ತರ ದಾಖಲೆಯ ಸಂಖ್ಯೆ ಮತ್ತು ಭರ್ಜರಿ ಆದಾಯದೊಂದಿಗೆ ಈ ಬಾರಿಯ ಹಾಸನಾಂಬೆ ಜಾತ್ರೆ ಗಮನ ಸೆಳೆದಿದೆ.
